ದಾವಣಗೆರೆ: ವಕ್ಫ್ ಬಿಲ್ ವಿರೋಧಿಸಿ ಗಲಭೆಗೆ ಪ್ರಚೋದನೆ ನೀಡಿದ್ದ ಆರೋಪದ ಹಿನ್ನೆಲೆ ಮಹಾನಗರ ಪಾಲಿಕೆ ಮಾಜಿ ಕಾಂಗ್ರೆಸ್ ಸದಸ್ಯ ಕಬೀರ್ ಖಾನ್‌ನನ್ನು ಆಜಾದ್‌ನಗರ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಈಚೆಗಷ್ಟೇ ವಕ್ಫ್ ಮಸೂದೆ ವಿರೋಧಿಸಿ ರೈಲು, ಬಸ್ಸಿಗೆ ಬೆಂಕಿ ಹಚ್ಚಬೇಕೆಂದು ಗಲಭೆ ಎಬ್ಬಿಸುವ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಕಬೀರ್ ಖಾನ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳಾದ ಅಬ್ದುಲ್ ಗನಿ ಮತ್ತು ಮೊಹಮ್ಮದ್ ಜುಬೇರ್‌ನನ್ನು ಬಂಧಿಸಿದ್ದರು. ಆದರೆ, ಎ1 ಆರೋಪಿ ಕಬೀರ್ ಖಾನ್ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ ಕಬೀರ್ ಖಾನ್ ಪತ್ತೆಗೆ ಪೊಲೀಸರು ಜಾಲ ಬೀಸಿದ್ದರು.
ಆರೋಪಿ ಕಬೀರ್‌ಖಾನ್ ತಲೆಮರೆಸಿಕೊಂಡು ಹೊರ ರಾಜ್ಯದಲ್ಲಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.