ಬೆಂಗಳೂರು: ಐಪಿಎಲ್ 18ನೇ ಆವೃತ್ತಿಯ ಇಂದಿನ ಪಂದ್ಯ ರಾಜಧಾನಿಗಳ ಬೃಹತ ಸಮರವಾಗಿದೆ, ರಾಜ್ಯ ರಾಜಧಾನಿ ಹಾಗೂ ರಾಷ್ಟ್ರ ರಾಜಧಾನಿ ನಡೆಯುವ ಇಂದಿನ ಕದನಕ್ಕೆ ನಗರದ ಚಿನ್ನಸ್ವಾಮಿ ಕ್ರಿಡಾಂಗಣ ಸಜ್ಜಾಗಿದ್ದು ಕ್ಷಣಗಣನೆ ಶುರುವಾಗಿದೆ,
ಒಂದೇ ಒಂದು ಪಂದ್ಯವನ್ನು ಸೋಲದ ತಂಡ ಎಂಬ ಹೆಗ್ಗಳಿಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ್ದಾಗಿದ್ದು. ಇನ್ನು ಆರ್‌ಸಿಬಿ ಆಡಿರುವ 4 ಪಂದ್ಯಗಳಲ್ಲಿ 3 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಉತ್ತಮ ಆರಂಭವನ್ನು ಕಂಡಿದೆ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿರುವ ಕೊನೆ 7 ಪಂದ್ಯಗಳ ಪೈಕಿ ಆರ್‌ಸಿಬಿ 4ರಲ್ಲಿ ಸೋಲನುಭವಿಸಿದೆ. ಆರ್‌ಸಿಬಿ ಮತ್ತು ಡೆಲ್ಲಿ ಇದುವರೆಗೆ 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್‌ಸಿಬಿ 19 ಗೆಲುವು ದಾಖಲಿಸಿದರೆ, ಡೆಲ್ಲಿ 11 ಗೆಲುವು ಪಡೆದಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಮುಗಿದಿದೆ. ಚಿನ್ನಸ್ವಾಮಿಯಲ್ಲಿ 12 ಪಂದ್ಯಗಳಲ್ಲಿ ಆರ್‌ಸಿಬಿ 8 ಬಾರಿ ಗೆದ್ದಿದ್ದು, ಡೆಲ್ಲಿ 4 ಗೆಲುವು ಸಾಧಿಸಿದೆ. ಆರ್‌ಸಿಬಿ ಈ ಬಾರಿ ಕೋಲ್ಕತಾ, ಚೆನ್ನೈ ಹಾಗೂ ಮುಂಬೈ ಭದ್ರ ಕೋಟೆಗಳನ್ನು ಬೇಧಿಸಿದ್ದರೂ ಇತ್ತೀಚೆಗೆ ತವರಿನಲ್ಲೇ ಸೋಲಿನ ಆಘಾತಕ್ಕೆ ಒಳಗಾಗಿದ್ದ ಆರ್‌ಸಿಬಿ ಈಗ ಮತ್ತೆ ತವರಿಗೆ ಆಗಮಿಸಿದೆ.
ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆರ್‌ಸಿಬಿ ತಂಡ ಪ್ರಸಕ್ತ ವರ್ಷ ಆಡಿದ 4 ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ 6 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.























