ಸರಣಿ ಅಫಘಾತ ಬಿಎಸ್‌ಎಫ್ ಯೋಧ ಸೇರಿ ಇಬ್ಬರು ಸಾವು

ವಿಜಯಪುರ: ಜೋರಾಗಿ ಬಂದ ಲಾರಿಯೊಂದು ಬೈಕ್, ಆಂಬ್ಯುಲೆನ್ಸ್, ಬೋರ್‌ವೆಲ್ ವಾಹನಕ್ಕೆ ಗುದ್ದಿ ಸರಣಿ ಅಪಘಾತ ಮಾಡಿದ ಪರಿಣಾಮ ಬಿಎಸ್‌ಎಫ್ ಯೋಧ ಹಾಗೂ ಆಂಬ್ಯುಲೆನ್ಸ್ ಚಾಲಕ ಸಾವಿಗೀಡಾದ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದ ಬಸ್ ನಿಲ್ದಾಣ ಬಳಿ ನಡೆದಿದೆ.
ಘಟನೆಯಲ್ಲಿ ಬಿಎಸ್‌ಎಫ್ ಯೋಧ ಮುದ್ದೇಬಿಹಾಳ ತಾಲೂಕು ಕಾಳಗಿ ತಾಂಡಾದ ನಿವಾಸಿ ಮೌನೇಶ ಖೂಬಪ್ಪ ರಾಠೋಡ(೩೫), ಕೇರಳ ಮೂಲದ ಆಂಬ್ಯುಲೆನ್ಸ್ ಚಾಲಕ ರಿತೀಶಕುಮಾರ (೫೦) ಅಸುನೀಗಿದ್ದಾರೆ.
ರಜೆ ಮೇಲೆ ಬಂದಿದ್ದ ಬಿಎಸ್‌ಎಫ್ ಯೋಧ ಮೌನೇಶ ರಾಠೋಡ ಅವರು ಮರಳಿ ಕರ್ತವ್ಯಕ್ಕೆ ತೆರಳಲು ರೈಲ್ವೆ ಟಿಕೆಟ್ ಬುಕ್ ಮಾಡಿ ಬೈಕ್‌ನಲ್ಲಿ ತಾಂಡಾಕ್ಕೆ ಹೋಗುತ್ತಿದ್ದರು. ಗುಜರಾತ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಲಾರಿ ಹಿಂಬದಿಯಿಂದ ಜೋರಾಗಿ ಬಂದು ಬೈಕ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಮೌನೇಶ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಬಳಿಕ ಲಾರಿ, ಆಂಬ್ಯುಲೆನ್ಸ್ಗೆ ಡಿಕ್ಕಿಯಾಗಿದೆ. ಆಂಬ್ಯುಲೆನ್ಸ್ ಮುಂದೆ ಇದ್ದ ಬೋರ್‌ವೆಲ್ ವಾಹನಕ್ಕೆ ಡಿಕ್ಕಿಯಾಗಿದ್ದು, ಲಾರಿ ಹಾಗೂ ಬೋರ್‌ವೆಲ್ ವಾಹನ ಮಧ್ಯೆ ಸಿಲುಕಿದ ಆಂಬ್ಯುಲೆನ್ಸ್ ನಜ್ಜುಗುಜ್ಜಾಗಿ ಚಾಲಕ ಗಂಭೀರ ಗಾಯಗೊಂಡಿದ್ದಾನೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆಂಬ್ಯುಲೆನ್ಸ್ ಡ್ರೈವರ್‌ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಅಸುನೀಗಿದ್ದಾನೆ. ನಂತರ ಲಾರಿ ತಾಳಿಕೋಟೆ-ವಾಸ್ಕೋ ಬಸ್‌ಗೆ ಡಿಕ್ಕಿಯಾಗಿದ್ದು, ಬಸ್‌ನಲ್ಲಿ ಇದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.