ಭಗವಂತನ ಆರಾಧನೆಗೆ ಮತ್ತು ಆತ್ಮಶುದ್ಧಿಗೆ ಸತ್ಸಂಗ ಬಹಳ ಸಹಕಾರಿ. ಸಜ್ಜನರು ಸೇರುವ ಜಾಗಗಳಿಗೆ ಹೋಗಿ, ಸತ್ಸಂಗದಲ್ಲಿ ಧ್ಯಾನ, ಭಜನೆ, ಪೂಜೆಗಳನ್ನು ಕೈಗೊಳ್ಳುತ್ತಾ ನಿರಂತರ ಪುಣ್ಯ ತೀರ್ಥಕ್ಷೇತ್ರಗಳ ಪ್ರವಾಸ ಮಾಡುತ್ತಾ ಭಗವಂತನ ಲೀಲಾ-ಗುಣಗಾನ ಅರಿತು, ಪುಣ್ಯಕ್ಷೇತ್ರಗಳ ಮಹಿಮೆಗಳನ್ನು ತಿಳಿಯುತ್ತಾ ಹೋದರೆ ಭಕ್ತಿಯು ವೃದ್ಧಿಯಾಗುತ್ತದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಇದನ್ನೇ ತಿಳಿಸುತ್ತಾನೆ.
“ಮಚ್ಛಿತ್ತಾ ಮದ್ಗತಪ್ರಾಣಾ ಬೋಧಯಂತಃ ಪರಸ್ಪರಂ|
ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ||”
ಸಜ್ಜನರ ಸಂಗದಿಂದ ಅಜ್ಞಾನ ಮತ್ತು ಅನರ್ಥ ನಿವಾರಣೆ | ಸತ್ಸಂಗದಿಂದ ದುರ್ವಿಷಯಗಳು ದೂರವಾಗುತ್ತವೆ. ಸತ್ಸಂಗದ ಮೂಲಕ ಜೀವನದ ಉದ್ದೇಶ ಮತ್ತು ಧರ್ಮವನ್ನು ಅರಿತುಕೊಳ್ಳಬಹುದು. ಸತ್ಸಂಗವು ಮನಸ್ಸಿಗೆ ಶಾಂತಿ ತರುತ್ತದೆ ಮತ್ತು ಆತ್ಮಸಾಕ್ಷಾತ್ಕಾರಕ್ಕೆ ಸಹಾಯ ಮಾಡುತ್ತದೆ. ಭಗವಂತನ ಮಹಿಮೆಯನ್ನು ಕೇಳುವುದರಿಂದ ಭಕ್ತಿ ವೃದ್ಧಿಯಾಗುತ್ತದೆ. ಸಜ್ಜನರ ಸಂಗದಿಂದ ನಾಸ್ತಿಕರೂ ಆಸ್ತಿಕರಾದ ಅನೇಕ ಉದಾಹರಣೆಗಳು ಇವೆ.
ಶ್ರೀ ಪುರಂದರ ದಾಸರು ಸದ್ಭಕ್ತರ ಸಂಗದಿಂದಲೇ ಭಗವಂತನ ಅನುಗ್ರಹ ದೊರೆಯುತ್ತದೆ ಎಂದು ತಿಳಿಸಿದ್ದಾರೆ.
“ಸಾಧುಜನರ ಸಂಗವೆ ಸಿಂಧುನು ದಾಟುವ ಹಂಗು” ಎಂದು ತಮ್ಮ ದೇವರನಾಮದಲ್ಲಿ ಉಲ್ಲೇಖ ಮಾಡಿದ್ದಾರೆ. ಸತ್ಸಂಗವು ಸಮುದ್ರ ದಾಟುವ ನೌಕೆಯಂತೆ, ಅದು ಎಂಥಾ ನೌಕೆ ಎಂದರೆ ಭವಸಾಗರವನ್ನು ಅಂದರೆ ಈ ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳ ಸಮುದ್ರವನ್ನು ದಾಟಲು ಸಹಾಯ ಮಾಡುವ ನೌಕೆಯಂತೆ. ಆದ್ದರಿಂದ ಒಳ್ಳೆಯವರ ಸಂಗ, ಒಳ್ಳೆಯವರ ದರ್ಶನ, ಸಜ್ಜನರ ಸಹವಾಸ ಅನಿವಾರ್ಯ ಎಂದು ತಿಳಿಸಿಕೊಟ್ಟಿದ್ದಾರೆ. ಶ್ರೀ ಕನಕದಾಸರು “ನಾರಾಯಣ ನಂಬಿದವರ ಸಂಗವಿಲ್ಲದೆ ಧಾರಾಳವೆಂಬೋಕು ಮರುಳು” ಎಂದು ತಿಳಿಸುತ್ತಾ ಭಗವಂತನಲ್ಲಿ ನಂಬಿಕೆ ಇಲ್ಲದ ಜೀವನ ವ್ಯರ್ಥ ಹಾಗು ದೇವರನ್ನು ನಂಬಿದವರ ಸಂಗಾ ವಿರದೆ ಸಾಧನೆಯ ದಾರಿಯಲ್ಲಿ ಮುನ್ನಡೆಯಲು ಸಾಧ್ಯವೇ ಇಲ್ಲ ಎಂದು ಸಾರಿದ್ದಾರೆ. “ಸಾಧುಜನರ ಸನ್ನಿಧಾನವೇ ಸ್ವರ್ಗ” ಒಳ್ಳೆಯ ಜನರ ಸಂಪರ್ಕವೇ ಪರಮಾತ್ಮನ ಸನ್ನಿಧಿಯಂತೆ, ಎಲ್ಲಿ ಸಜ್ಜನರ ಸಂಗವಿರುತ್ತದೆಯೋ, ಎಲ್ಲಿ ಸತ್ಸಂಗದಲ್ಲಿ ಭಕ್ತಿ ಭಾವದಿಂದ ಭಜನೆ ಪುರಾಣ ಪುಣ್ಯಕಥೆಗಳು, ದೇವರ ಬಗ್ಗೆ ವಿಮರ್ಶೆಗಳು ನೆಡೆಯುತ್ತವೆಯೋ ಅಲ್ಲಿಗೆ ಕರಿಯದಿದ್ದರೂ ಹೋಗಬೇಕು. ಅಂಥಾ ಸ್ಥಳಗಳಿಗೆ ಹೋದರೆ ಸ್ವರ್ಗದ ದಾರಿ ತಾನಾಗಿಯೇ ಗೋಚರಿಸುತ್ತದೆ ಎಂದು ಶ್ರೀ ವಿಜಯದಾಸರು ತಿಳಿಸಿಕೊಟ್ಟಿದ್ದಾರೆ.
ವೇದಗಳು ಹೇಳುವಂತೆ, “ಸತ್ಸಂಗೋ ಹಿ ಪರಾ ಗತಿಃ” (ಸತ್ಸಂಗವೇ ಪರಮ ಗತಿ) ವೇದಗಳು ಸತ್ಸಂಗವನ್ನು ಜೀವಿತದ ಪರಮ ಹಿತವನ್ನು ಸಾಧಿಸುವ ಮಾರ್ಗವೆಂದು ಹೇಳುತ್ತವೆ. ಒಳ್ಳೆಯವರ ಸಂಗವನ್ನು ಅಳವಡಿಸಿಕೊಂಡರೆ, ನಮ್ಮ ಜೀವನ ಶ್ರೀಮಂತವಾಗುತ್ತದೆ, ಶ್ರೇಷ್ಠಗೊಳ್ಳುತ್ತದೆ ಮತ್ತು ಶೀಘ್ರದಲ್ಲಿ ಭಗವಂತನ ಕಾರುಣ್ಯಕ್ಕೆ ನಾವೆಲ್ಲರೂ ಪಾತ್ರರಾಗಬಹುದು.