ಕರ್ನಾಟಕದಲ್ಲಿ ಮಾತ್ರ ಪರಿಸ್ಥಿತಿ ವ್ಯತಿರಿಕ್ತ :ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದಕ್ಕೆ ಸಾಕಲ್ಲವೇ ಈ ನಿದರ್ಶನ
ಬೆಂಗಳೂರು: ಭಾರತ ವಿಶ್ವಕ್ಕೇ ಮಾದರಿ ದೇಶ ಆದರೆ, ಕರ್ನಾಟಕದಲ್ಲಿ ಮಾತ್ರ ಪರಿಸ್ಥಿತಿ ವ್ಯತಿರಿಕ್ತವಾಗಿದೆ! ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ವಿಶ್ವಸಂಸ್ಥೆ ವರದಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಾಯಿ-ಮಕ್ಕಳ ರಕ್ಷಣೆಯಲ್ಲಿ ಭಾರತದ ಪಾತ್ರವನ್ನು ವಿಶ್ವಸಂಸ್ಥೆಯೇ ಶ್ಲಾಘಿಸಿದೆ. ಗರ್ಭಿಣಿಯರು, ಬಾಣಂತಿಯರು ಮತ್ತು ನವಜಾತ ಶಿಶುಗಳ ಮರಣ ಪ್ರಮಾಣ ತಗ್ಗಿಸುವಲ್ಲಿ ಭಾರತ ವಿಶ್ವಕ್ಕೇ ಮಾದರಿ ದೇಶ ಎಂದು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಆಯುಷ್ಮಾನ್ ಭಾರತ್ ನಂತಹ ಅನನ್ಯ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದೆ.
ತಾಯಿ-ಮಕ್ಕಳ ಮರಣ ಪ್ರಮಾಣ ತಗ್ಗಿಸುವಲ್ಲಿ ಜಾಗತಿಕ ದರ ಶೇ. ೫೧ರಿಂದ ೫೮ರವರೆಗೆ ಇದ್ದರೆ, ಭಾರತ ಶೇ.೬೫ರಿಂದ ೭೫ರ ದರದಲ್ಲಿದೆ ಎಂಬುದನ್ನು ವಿಶ್ವಸಂಸ್ಥೆ ವರದಿಯೇ ಹೇಳಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಪರಿಸ್ಥಿತಿ ವ್ಯತಿರಿಕ್ತವಾಗಿದೆ! ರಾಜ್ಯದೆಲ್ಲೆಡೆ ಇತ್ತೀಚಿನ ದಿನಗಳಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಮರಣ ಹೆಚ್ಚಿದೆ. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷವೇ ಕಾರಣ.
ರಾಜ್ಯದೆಲ್ಲೆಡೆ ಸಂಭವಿಸಿದ ಬಾಣಂತಿಯರು ಮತ್ತು ನವಜಾತ ಶಿಶುಗಳ ಮರಣವನ್ನು ಶೇ.೭೦ರಷ್ಟು ತಡೆಯಬಹುದಿತ್ತು ಎಂದು ಆಡಿಟ್ ವರದಿ ಬಿಡುಗಡೆ ಮಾಡಿರುವ ಸ್ವತಃ ರಾಜ್ಯ ಆರೋಗ್ಯ ಸಚಿವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅಂದರೆ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಕುಸಿದಿದೆ ಎಂಬುದಕ್ಕೆ ಸಾಕಲ್ಲವೇ ಈ ನಿದರ್ಶನ.!? ಎಂದಿದ್ದಾರೆ.