ದಾರ್ಶನಿಕರು ಹೇಳುತ್ತಾರೆ, ಅತಿಥಿಯೊಬ್ಬ ನಮ್ಮ ಮನೆಗೆ ಬರುವ ಮೊದಲೇ ಅವನ ಅನ್ನ ಪರೋಕ್ಷವಾಗಿ ನಮ್ಮ ಮನೆಗೆ ಬಂದಿರುತ್ತದೆ. ಅವನು ಸತ್ಕಾರ ಪಡೆದು ಸಂತೃಪ್ತಿಯಾಗಿ ಹೊರಡುವಾಗ ಅನ್ನಭಾಗ್ಯದ ಅಕ್ಷಯಪಾತ್ರೆಯನ್ನು ಬಿಟ್ಟು ಹೋಗುತ್ತಾನೆ.' ಆದುದರಿಂದಲೇ ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಯನ್ನು ದೇವರ ಸಮಾನವೆಂದು(
ಅತಿಥಿ ದೇವೋ ಭವ’) ಕಾಣಲಾಗಿದೆ. ಅಲ್ಲದೆ ಅತಿಥಿ ಸತ್ಕಾರವನ್ನು ದೇವಸೇವೆ ಎಂತಲೇ ಹೇಳಲಾಗುತ್ತದೆ.
ಅತಿಥಿ ಹಾಗೂ ಅವನ ಸತ್ಕಾರಗಳು (ಆತಿಥ್ಯ) ಸಾಂಸ್ಕೃತಿಕ ಮೇರೆಗಳನ್ನು ಮೀರಿದ ಮಾನವೀಯ ಸ್ಪಂದನೆಯ ಸಾರ್ವತ್ರಿಕ ಸಂಕೇತಗಳಾಗಿವೆ. ಈ ಪರಿಕಲ್ಪನೆಯು ಸರ್ವಧರ್ಮಗಳ ನಂಬಿಗೆಗಳ ಸಾಮಾಜಿಕ ರಚನೆಗಳಲ್ಲಿ ಆಳವಾಗಿ ಬೇರೂರಿವೆ. ಅಲ್ಲದೆ ಆತಿಥ್ಯವನ್ನು ಪವಿತ್ರ ಕರ್ತವ್ಯ ಹಾಗೂ ಗೌರವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅತಿಥಿ-ಅಭ್ಯಾಗತರನ್ನು ತೆರೆದ ಬಾಹುಗಳಿಂದ ಸ್ವಾಗತಿಸುವುದೇ ನಾಗರಿಕ ಸಮಾಜದ ಮುಖ್ಯ ಲಕ್ಷಣವಾಗಿದೆ. ದಯವಿಟ್ಟು ಒಳಗೆ ಬನ್ನಿ, ಸ್ವಾಗತ, ಸುಸ್ವಾಗತ' ಮುಂತಾದ ಅರ್ಥಗಳುಳ್ಳ ವಿವಿಧ ಶಬ್ದಗಳ ಮೂಲಕ ನಾವು ಅತಿಥಿಗಳನ್ನು ಬರಮಾಡಿಕೊಳ್ಳುತ್ತೇವೆ. ಕೆಲವು ಪ್ರಾಚೀನ ಸಂಸ್ಕೃತಿಗಳಲ್ಲಿ ಅತಿಥಿ ಸತ್ಕಾರವೆಂದರೆ ಅವರನ್ನು ಸ್ವಾಗತಿಸುವುದಷ್ಟೇ ಅಲ್ಲ, ಅವರಿಗೆ ಆಹಾರ ಸುರಕ್ಷತೆಯನ್ನು ನೀಡುವುದೂ ಆಗಿದೆ. ಇಸ್ಲಾಂಮಿನ ಸಂಸ್ಕೃತಿಯಲ್ಲಿ ಅತಿಥಿಯನ್ನು ಮೊದಲನೆಯ ಸಾರೆ ನೋಡಿದಾಗಲೇ
ಅಸ್ಸಲಾಮು ಅಲೈಕುಮ್’ (ದೇವಕೃಪೆ ನಿಮ್ಮ ಮೇಲಿರಲಿ') ಎಂಬ ಸದ್ಭಾವನೆಯಿಂದ ಬರಮಾಡಿಕೊಳ್ಳಲಾಗುತ್ತದೆ. ಕುರಾನಿನ ಈ ವಚನವನ್ನು (ಅನ್‌ಹಲ್ ೧೬:೧೨೫) ನೋಡಿ,
ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಳ್ಳಿ, ಉತ್ತಮವಾಗಿ ಕರುಣೆಯಿಂದ ಮಾತನಾಡಿ’ ಎಂದು ಆಜ್ಞಾಪಿಸಲಾಗಿದೆ. ಅಲ್ಲಾಹನಲ್ಲಿ ಹಾಗೂ ಕೊನೆಯ ದಿನದಲ್ಲಿ ನಂಬಿಕೆಯನ್ನು ಇಟ್ಟಿರುವವನು (ಬುಖಾರಿ ಮುಸ್ಲಿಮ್) ಅತಿಥಿಯನ್ನು ಗೌರವಿಸಬೇಕು. ಪ್ರವಾದಿವರ್ಯರು ಅತಿಥಿಗಳನ್ನು ಸ್ವಾಗತಿಸುತ್ತ ಆತಿಥ್ಯವನ್ನು ವಹಿಸುವಂತೆ ಪ್ರೋತ್ಸಾಹಿಸುತ್ತಿದ್ದರು.
ಅತಿಥಿಗಳ ಜೊತೆಗೆ ಮಾತನಾಡುವಾಗಲೂ ನಾಲಿಗೆಯ ರಕ್ಷಣೆ ಬಹಳ ಅಗತ್ಯ. ಪರದೂಷಣೆ, ಬೈಗುಳ, ಹರಟೆ, ವ್ಯರ್ಥ ಮಾತುಕತೆಗಳನ್ನು ವರ್ಜಿಸಬೇಕು. `ಅತಿಥಿಯ ಜೊತೆಗೆ ಮಾತನಾಡುವ ಮೊದಲು, ನಾವು ಮಾತನಾಡುವ ಮಾತು ಅತಿಥಿಯ ಸ್ವಭಾವಕ್ಕೆ ತಕ್ಕದಾಗಿದೆಯೇ ಎಂದು ಆಲೋಚಿಸಬೇಕು’ ಎಂದು ಮುಂತಾಗಿ ಪ್ರವಾದಿವರ್ಯರು ಅನೇಕ ಸಂದರ್ಭಗಳಲ್ಲಿ ಉಪದೇಶಿಸಿದ್ದಾರೆ.
ಇಸ್ಲಾಮಿ ಸಂಸ್ಕೃತಿಯಲ್ಲಿ ಅತಿಥಿಗಳಿಗೆ ಆಹಾರ ನೀಡುವುದನ್ನೇ ಹೆಚ್ಚು ಪ್ರೋತ್ಸಾಹಿಸಲಾಗುತ್ತದೆ. ಅದು ಔದಾರ್ಯದ ಸಂಕೇತವೆಂದು ಪ್ರವಾದಿವರ್ಯರು ಅನೇಕ ಸಂದರ್ಭಗಳಲ್ಲಿ ಉಪದೇಶಿಸಿದ್ದಾರೆ. ಅತಿಥಿಗಳು ಬರುವುದರಿಂದ ನಮ್ಮ ಸಂಪನ್ಮೂಲಗಳು ಬರಿದಾಗುತ್ತವೆ ಎಂದು ತಿಳಿಯಬಾರದು.
ಅತಿಥಿಗಳನ್ನು ಬರಮಾಡಿಕೊಳ್ಳುವವರು ಉದಾರಿಯಾಗಿರಬೇಕು. ಆಹಾರವನ್ನು ಹಂಚಿಕೊಂಡಾಗ ಅದರ ಪ್ರಮಾಣ ಹೆಚ್ಚಾಗುವಂತೆ ದೇವರು ಆಶೀರ್ವಾದ ಮಾಡುತ್ತಾನೆ. ಅದು ಅಕ್ಷಯಪಾತ್ರೆಯಂತೆ ಎಲ್ಲರಿಗೂ ಸಾಕಾಗುತ್ತದೆ.
ಅತಿಥಿಗಳ ಆಗಮನ-ನಿರ್ಗಮನಗಳ ಸಮಯದಲ್ಲಿ ಪರಸ್ಪರರು ದೇವರ ಶುಭಾಶಯಗಳನ್ನು ಹೇಳಿ. ಅತಿಥಿ ಬರುವಾಗ ಅನ್ನಭಾಗ್ಯ ತರುತ್ತಾನೆ, ಹೋಗುವಾಗ ಅಕ್ಷಯಪಾತ್ರೆ ಬಿಟ್ಟುಹೋಗುತ್ತಾನೆ.