ರೈತನಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಬಲೆಗೆ ಬಿದ್ದ ಬೆಸ್ಕಾಂ ಎಇಇ

0
11

ದಾವಣಗೆರೆ: ಟಿಸಿ ಬದಲಾಯಿಸಲು ರೈತನಿಂದ ಲಂಚ ಸ್ವೀಕರಿಸುತ್ತಿದ್ದಾಗ ಶನಿವಾರ ಬೆಸ್ಕಾಂ ಸಹಾಯಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಬೆಸ್ಕಾಂ ಕಚೇರಿ ಸಹಾಯಕ ಇಂಜಿನಿಯರ್ ಮೋಹನ್‌ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಚನ್ನಗಿರಿ ತಾಲೂಕಿನ ಮಲ್ಲಾಪುರ ಗ್ರಾಮದ ಬಿ.ಎಂ.ಮಂಜುನಾಥ್ ಎಂಬುವರು, ತನ್ನ ಚಿಕ್ಕಪ್ಪನ ಹೊಲದಲ್ಲಿ ಅಳವಡಿಸಿದ್ದ ಟಿಸಿ ಕಳೆದ ಒಂದು ವರ್ಷದ ಹಿಂದೆ ಸುಟ್ಟಿತ್ತು. ಸುಟ್ಟ ಟಿಸಿ ಬದಲಾಯಿಸಿ ಬೇರೆ ಟಿಸಿಯನ್ನು ಅಳವಡಿಸುವಂತೆ ಅರ್ಜಿ ಸಲ್ಲಿಸಿದ್ದರು.
ಟಿಸಿ ಬದಲಾಯಿಸಲು ಸಹಾಯಕ ಇಂಜಿನಿಯರ್ ಮೋಹನ್‌ಕುಮಾರ್, ರೈತನಿಗೆ ೧೦ ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬಿ.ಎಂ.ಮಂಜುನಾಥ್, ದಾವಣಗೆರೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಲೋಕಾಯುಕ್ತ ಪೊಲೀಸರ ಮಾರ್ಗದರ್ಶನದಂತೆ ಸಂತೇಬೆನ್ನೂರು ಬೆಸ್ಕಾಂ ಕಚೇರಿಯಲ್ಲಿ ರೈತನಿಂದ ೧೦ ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ, ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕಿ ಕಲಾವತಿ, ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಎಚ್.ಗುರುಬಸವರಾಜ, ಪಿ.ಸರಳ, ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Previous articleಪ್ರೇಮ ಪ್ರಕರಣ: ಸಹೋದರರಿಂದ ಹಿಂಸಾತ್ಮಕ ಅಂತ್ಯ
Next articleರಸ್ತೆ ಅಪಘಾತ, ಪಲ್ಟಿಯೊಡೆದ ಬಸ್, ಬೈಕ್ ಸವಾರರಿಬ್ಬರು ಸಾವು