ಮೂಡಿಗೆರೆ: ಹೇಮಾವತಿ ನದಿಗೆ ಕಿಡಿಗೇಡಿಗಳು ವಿಷಹಾಕಿದ್ದು, ಸಾವಿರಾರು ಮೀನುಗಳ ಮಾರಣ ಹೋಮ ನಡೆದಿರುವ ಘಟನೆ ತಾಲ್ಲೂಕಿನ ಬಣಕಲ್ ಗ್ರಾಮದ ಬಳಿ ನಡೆದಿದೆ.
ಇದರ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ನದಿಯ ದಡದಲ್ಲಿ ಹಾಗೂ ನೀರಿನ ಮೇಲ್ಮೈಯಲ್ಲಿ ತೇಲುತ್ತಿರುವ ಭಯಾನಕ ದೃಶ್ಯ ಕಂಡು ಬಂದಿದೆ.
೨ ಕಿ.ಮೀ. ವರಗೆ ಸಾವಿರಾರು ಮೀನುಗಳು ಮೃತಪಟ್ಟಿದ್ದು, ನೀರಿನಲ್ಲಿ ಮೀನುಗಳು ತೇಲುತ್ತಿವೆ. ಕಿಡಿಗೇಡಿಗಳು ಮೈಲುತುತ್ತು (ನೈಸರ್ಗಿಕ ಅಥವಾ ರಾಸಾಯನಿಕ ವಿಷ) ಬಳಸಿ ಮೀನುಗಳ ಮಾರಣಹೋಮ ನಡೆಸಿದಂತೆ ಅನುಮಾನ ಮೂಡಿದ್ದು, ವಾಣಿಜ್ಯ ಉದ್ದೇಶಕ್ಕಾಗಿ ಮೀನುಗಳನ್ನು ಕಡಿಮೆ ಖರ್ಚಿನಲ್ಲಿ ಮಾರಾಟ ಮಾಡಲು ಈ ರೀತಿಯ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ನದಿ ನೀರು ಹಾಸನದ ಗೊರೂರು ಡ್ಯಾಂ ಸೇರುತ್ತದೆ. ಈ ವಿಷಕಾರಿ ನೀರು ಪರಿಸರ ಮತ್ತು ಮಾನವ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮಾರ್ಗ ಮಧ್ಯೆ ಹತ್ತಾರು ಹಳ್ಳಿಗಳ ಜನ ಕುಡಿಯುವ ನೀರಾಗಿ ಈ ನದಿಯನ್ನು ಅವಲಂಬಿಸಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.
ಈ ರೀತಿಯ ವಿಷಪ್ರಯೋಗದ ಕೃತ್ಯಗಳು ಮುಂದುವರೆಯದಂತೆ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿರುವುದರಿಂದ ಸಾರ್ವಜನಿಕರ ದೂರಿನ ಮೇರೆಗೆ ಪ್ರಕರಣ ದಾಖಲಾಗುತ್ತಿದ್ದು, ತನಿಖೆಗೆ ಪೊಲೀಸರು ಮುಂದಾಗುವ ಸಾಧ್ಯತೆಗಳಿವೆ.