ಚಿತ್ರದುರ್ಗ: ಒಳಮೀಸಲಾತಿಗಾಗಿ ಮೂರು ದಶಕಗಳ ಹೋರಾಟ ನಡೆಸಿದ್ದ ಮಾದಿಗ ಸಮುದಾಯಕ್ಕೆ ಸಿದ್ದರಾಮಯ್ಯ ಸಂತಸದ ಸುದ್ದಿ ನೀಡಿದ್ದು, ಪರಿಶಿಷ್ಟ ಜಾತಿ ಸೀಮಿತಗೊಳಿಸಿ ಜಾತಿಗಣತಿಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಿರುವುದು ಉತ್ತಮ ನಿರ್ಧಾರವಾಗಿದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದ್ದಾರೆ.
ಪರಿಶಿಷ್ಟ ಜಾತಿಗಳಲ್ಲಿನ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಸರ್ಕಾರದ ದಿಟ್ಟ ನಡೆ ಕೈಗೊಂಡಿದ್ದು, ಏಪ್ರಿಲ್, ಮೇ ಈ ಎರಡು ತಿಂಗಳಲ್ಲಿ ಜಾತಿಗಣತಿ ನಡೆಸಿ, ಜೂನ್ ತಿಂಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಕೈಗೊಂಡಿರುವ ನಿರ್ಧಾರ ಸ್ವಾಗತರ್ಹವಾಗಿದೆ ಎಂದಿದ್ದಾರೆ.
ಎರಡು ತಿಂಗಳಲ್ಲಿ ಜಾತಿಗಣತಿ ಪೂರ್ಣಗೊಂಡು ಜೂನ್ ಮೊದಲ ವಾರದಲ್ಲಿ ಸರ್ಕಾರದ ಕೈ ಸೇರಲಿದ್ದು, ಜೂನ್ ತಿಂಗಳಲ್ಲಿಯೇ ಒಳಮೀಸಲಾತಿ ಜಾರಿಗೊಳ್ಳಲಿದೆ. ಆದ್ದರಿಂದ ನಾವೆಲ್ಲರೂ ಅಂದು ಯುಗಾದಿ ಹಬ್ಬವನ್ನು ಆಚರಿಸೋಣ. ಅಲ್ಲಿಯವರೆಗೆ ನಾವೆಲ್ಲರೂ ಜಾತಿಗಣತಿ ಸಮೀಕ್ಷೆಗೆ ಸಹಕರಿಸಬೇಕು. ಸಮುದಾಯದವರಲ್ಲಿ ಜಾಗೃತಿ ಮೂಡಿಸೋಣ ಎಂದು ಸಮುದಾಯದವರಿಗೆ ಮನವಿ ಮಾಡಿದ್ದಾರೆ.