ಕಲಬುರಗಿ : ಕಪ್ಪು ಪಟ್ಟಿಯಲ್ಲಿರುವ ಆರ್ ಟಿಐ ಕಾರ್ಯಕರ್ತನ ಹೆಸರು ತೆಗೆಯಲು ಹಣದ ಬೇಡಿಕೆ ಇಟ್ಟಿದ್ದ ರಾಜ್ಯ ಮಾಹಿತಿ ಆಯೋಗದ ಆಯುಕ್ತರೊಬ್ಬರು ಗುರುವಾರ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಲಬುರಗಿ ಪೀಠದ ಆಯುಕ್ತರಾಗಿರುವ ರವೀಂದ್ರ ಗುರುನಾಥ ಡಾಕಪ್ಪ ಲೋಕಾಯುಕ್ತರ ಬಲೆಗೆ ಬಿದ್ದಿರುವ ಅಧಿಕಾರಿ ಎಂದು ತಿಳಿದು
ಬಂದಿದೆ.
ರವೀಂದ್ರ ಗುರುನಾಥ ಡಾಕಪ್ಪ ಅವರು, ಕಲಬುರಗಿಯ ತಮ್ಮ ಕಚೇರಿಯಲ್ಲಿ ಹಣ ತೆಗೆದುಕೊಳ್ಳುತ್ತಿದ್ದ ವೇಳೆಯಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಡಾಕಪ್ಪ ಅವರು ಕಪ್ಪು ಪಟ್ಟಿಯಲ್ಲಿರುವ ಆರ್ ಟಿಐ ಕಾರ್ಯಕರ್ತರ ಹೆಸರು ತೆಗೆಯಲು ಆರ್ ಟಿಐ ಕಾರ್ಯಕರ್ತ ಸಾಯಿಬಣ್ಣ ಸಾಸಿ ಬೆನಕನಹಳ್ಳಿಯಿಂದ 3 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈಗಾಗಲೇ 1 ಲಕ್ಷ ರೂ, ಗಳನ್ನು ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದ ಆಯುಕ್ತರು, ಉಳಿದ ಹಣ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಲೋಕಾಯುಕ್ತ ಡಿವೈಎಸ್ ಪಿ ಗೀತಾ ಬೇನಾಳ್ ನೈತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಸದ್ಯ ಗುರುನಾಥ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ.
ಎಸ್.ಪಿ ಬಿ.ಕೆ. ಉಮೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೀತಾ ಬೆನಾಳ, ಪೊಲೀಸ್ ಇನ್‌ಸ್ಪೆಕ್ಟರ್ ಅರುಣಕುಮಾರ್ ಹಾಗೂ ಸಿಬ್ಬಂದಿಯವರಾದ ಮಲ್ಲಿನಾಥ್, ಹನುಮಂತ, ಬಸವರಾಜ್, ಪೈಮೊದಿನ ತಂಡದಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.