ಯತ್ನಾಳ ಉಚ್ಚಾಟನೆ ಮರುಪರಿಶೀಲನೆ ಮಾಡಬೇಕು

ಬಳ್ಳಾರಿ: ಕಟ್ಟಾ ಹಿಂದೂವಾದಿ, ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ ಅವರ ಉಚ್ಚಾಟನೆಯನ್ನು ಮರುಪರಿಶೀಲನೆ ಮಾಡಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಬಳ್ಳಾರಿಯ ಹಾವಂಭಾವಿ ಪ್ರದೇಶದಲ್ಲಿನ ಅವರ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಲಿಂಗಾಯತರಲ್ಲಿ ಪಂಚಮಸಾಲಿ ಸಮುದಾಯ ಶೇ.೨೪ ರಷ್ಟು ಜನಸಂಖ್ಯೆ ಇದೆ. ರಾಜ್ಯ ರಾಜಕೀಯದ ಇತಿಹಾಸ ಗಮನಿಸಿದಾಗ ಮಾಜಿ ಮುಖ್ಯಂಮತ್ರಿ ನಿಜಲಿಂಗಪ್ಪ ಹಾದಿಯಾಗಿ, ವೀರೇಂದ್ರ ಪಾಟೀಲ್ ಸಿಎಂ ಇರುವಾಗಲೂ ಕಾಂಗ್ರೆಸ್ ಜತೆಗೆ ಪಂಚಮಸಾಲಿ ಸಮುದಾಯ ಗಟ್ಟಿಯಾಗಿ ನೆಲೆ ನಿಂತಿತ್ತು. ಆದರೆ ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದಾಗ ಆ ಸಮುದಾಯದ ಜನ ಜನತಾದಳಕ್ಕೆ ವಾಲಿದರು. ಈಗ ಕ್ರಮೇಣ ಈ ಜನಾಂಗ ಬಿಜೆಪಿಯತ್ತ ವಾಲಿದೆ. ಕಳೆದ ಎರಡು ದಶಕದಿ‌ಂದಲೂ ಬಿಜೆಪಿ ಪರವಾಗಿದ್ದಾರೆ. ಇಂತಹ ಹೊತ್ತಲ್ಲಿ ಅದೇ ಸಮುದಾಯದ ಪ್ರಭಾವಿ ನಾಯಕ‌ ಯತ್ನಾಳ‌ ಉಚ್ಚಾಟನೆ ಆ ಸಮುದಾಯಕ್ಕೂ, ಕಟ್ಟಾ ಹಿಂದೂಗಳಿಗೂ ನೋವು‌ ತರಿಸಿದೆ. ಹೀಗಾಗಿ ದೆಹಲಿ ನಾಯಕರು ಈ ನಿರ್ಧಾರವನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದರು.
ಅಗತ್ಯ ಬಿದ್ದರೆ ದೆಹಲಿಗೆ: ಈಗಾಗಲೇ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು ಸೇರಿ ನಮ್ಮ ಸಮಾಜದ ಸ್ವಾಮೀಜಿಗಳು ನನ್ನ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅವರ ನಿಲುವು ಕೂಡ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಬಿಜೆಪಿಯಲ್ಲಿ ಉಳಿಸುವುದು ಆಗಿದೆ. ‌ನಾನು ಕೂಡ ಯತ್ನಾಳ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿರುವೆ. ಅವರು ಸಿಕ್ಕಿಲ್ಲ. ರಾಜ್ಯ, ರಾಷ್ಟ್ರೀಯ ನಾಯಕರ ಜತೆಗೂ ಈ ಬಗ್ಗೆ ಚರ್ಚೆ ನಡೆಸುವೆ. ಅಗತ್ಯ ಬಿದ್ದರೆ ನಾನು ದೆಹಲಿಗೆ‌ ಹೋಗಿ ಹೈಕಮಾಂಡ್ ಮನವೊಲಿಸುವ ಪ್ರಯತ್ನ ಮಾಡುವೆ ಎಂದರು.