ಬರಿದಾಗಿದ್ದ ಕಂದಡ್ಕ ಹೊಳೆಯ ಒಡಲಿನಲ್ಲಿ ಜಲಸಮೃದ್ಧಿ..!
ಸುಳ್ಯ: ಎರಡು ದಿನ ನಿರಂತರ ಮಳೆ ಸುರಿದ ಕಾರಣ ಬತ್ತಿ ಬರಡಾಗಿದ್ದ ಹೊಳೆಗಳು, ನದಿಗಳಲ್ಲಿ ಮತ್ತೆ ನೀರಿನ ಹರಿವು ಆರಂಭಗೊಂಡಿದ್ದು ಜೀವಕಳೆ ಬಂದಿದೆ. ಬರಡಾಗಿದ್ದ ನದಿ, ಹೊಳೆಗಳ ಒಡಲು ಮತ್ತೆ ನೀರು ತುಂಬಿಕೊಳ್ಳುತಿದೆ. ಕಳೆದ ಹಲವಾರು ದಿನಗಳಿಂದ ಬತ್ತಿ ಬರಡಾಗಿ ಕಲ್ಲುಗಳೇ ಪ್ರತ್ಯಕ್ಷವಾಗುತ್ತಿದ್ದ, ಮೈದಾನದಂತೆ ಭಾಸವಾಗಿದ್ದ ಸುಳ್ಯದ ಕಂದಡ್ಕ ಹೊಳೆಯ ಒಡಲಿನಲ್ಲಿ ಜೀವಜಲ ಹರಿದಿದೆ. ಇದೀಗ ಕೆಂಪು ಬಣ್ಣದ ನೀರು ಹೊಳೆಯಲ್ಲಿ ತುಂಬಿ ಹರಿಯುತಿದೆ. ಕಳೆದ ಎರಡು ದಿನಗಳಿಂದ ಎಲ್ಲೆಡೆ ವ್ಯಾಪಕ ಮಳೆಯಾಗಿತ್ತು. ಮಂಗಳವಾರ ಮತ್ತು ಬುಧವಾರ ಸುಳ್ಯದಲ್ಲಿ ಭರ್ಜರಿ ಮಳೆಯಾಗಿತ್ತು. ಬಿಸಿಲಿನ ಝಳ, ಏರಿದ ಉಷ್ಣಾಂಶದಿಂದ ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಬೇಸಿಗೆ ಆರಂಭವಾದಾಗ ತೋಟಗಳಿಗೆ ನೀರುಣಿಸುತ್ತಿದ್ದ ಪಂಪ್‌ಗಳು ನಿರಂತರ ಚಾಲೂ ಆಗ ತೊಡಗಿದಾಗ ಕಂದಡ್ಕ ಹೊಳೆ ಸಂಪೂರ್ಣ ಹರಿವು ನಿಲ್ಲಿಸಿ ಬತ್ತಿ ಹೋಗಿತ್ತು. ಅಲ್ಲಲ್ಲಿ ಹೊಂಡದಲ್ಲಿ ಮಾತ್ರ ಅಲ್ಪ ಸ್ವಲ್ಪ ನೀರು ತುಂಬಿತ್ತು. ಇದೀಗ ಉತ್ತಮ ಮಳೆ ಬಂದಿರುವ ಕಾರಣ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಎರಡು ದಿನ ಸುರಿದ ಮಳೆಯ ಕಾರಣ ಕಂದಡ್ಕ ಹೊಳೆಯಿಂದ ಕೃಷಿಗೆ ನೀರುಣಿಸುತ್ತಿದ್ದ ಪಂಪ್ ಸೆಟ್‌ಗಳು ಸ್ಥಬ್ದವಾಗಿರುವುದು ಹೊಳೆಯು ತನ್ನ ವೈಭವವನ್ನು ಮರಳಿ ಪಡೆಯಲು ಕಾರಣವಾಗಿದೆ.