ಸುಬುಧೇಂದ್ರ ತೀರ್ಥರಿಂದ ವಿವಾದಾತ್ಮಕ ಹೇಳಿಕೆ: ಭುಗಿಲೆದ್ದ ಕೊಪ್ಪಳ ರಾಯರ ಮಠದ ವಿವಾದ

ಕೊಪ್ಪಳ ವಿಪ್ರರಿಂದ ಆಕ್ರೋಶ, ಶ್ರೀಗಳ ಹೇಳಿಕೆಗೆ ಖಂಡನೆ

ಕೊಪ್ಪಳ: ಕೊಪ್ಪಳ ರಾಘವೇಂದ್ರ ಮಠ ೧೯೭೧ರಲ್ಲಿ ಮಂತ್ರಾಲಯದ ಮಠಕ್ಕೆ ಸೇರಿದೆ ಎಂದು ಮಂತ್ರಾಲಯದ ರಾಯರ ಮಠದ ಸುಬುಧೇಂದ್ರ ತೀರ್ಥರ ವಿವಾದಾತ್ಮಕ ಹೇಳಿಕೆಯಿಂದ ನಗರದ ವಿಪ್ರರು ಆಕ್ರೋಶಗೊಂಡು, ಖಂಡಿಸಿದ್ದಾರೆ‌. ಈ ಮೂಲಕ ಕೊಪ್ಪಳದ ರಾಯರ ಮಠದ ವಿವಾದವು ರಾತ್ರೋ ರಾತ್ರಿ ಭುಗಿಲೆದ್ದಿದೆ.

ನಗರದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ರಾತ್ರಿ ಆಗಮಿಸಿದ ಸುಬುಧೇಂದ್ರ ತೀರ್ಥರ ಸ್ವಾಮೀಜಿಗೆ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ಆಶೀರ್ವಚನ ನೀಡುವಾಗ ಶ್ರೀಗಳು, ಮಠಕ್ಕೆ ನೂತನವಾಗಿ ಟ್ರಸ್ಟ್ ರಚನೆ ಮಾಡಬೇಕು. ಟ್ರಸ್ಟ ಸಮಿತಿಯಲ್ಲಿ ಯಾರು ಇರಬೇಕು ಎನ್ನುವ ಪಟ್ಟಿಯನ್ನು ನೀಡಿ. ಅದರಲ್ಲಿ ಟ್ರಸ್ಟ ಸಮಿತಿಯಲ್ಲಿ ಯಾರು ಇರಬೇಕು ಎಂಬ ಬಗ್ಗೆ ತೀರ್ಮಾನಿಸುತ್ತೇವೆ. ಮಠವು ಶಿಥಿಲಗೊಂಡಿದ್ದು, ನಾವು ಹಣ ನೀಡಿ ಅಭಿವೃದ್ಧಿ ಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ ನಗರದ ಬಸವನಗರದ ರಾಘವೇಂದ್ರಾಚಾರ್ ನಿವಾಸಕ್ಕೆ ತೆರಳಿದ್ದರು. ವಿವಾದಾತ್ಮಕ ಹೇಳಿಕೆ ಖಂಡಿಸಿ, ನಗರದ ರಾಘವೇಂದ್ರ ಮಠದಿಂದ ನೂರಾರು ಜನ ವಿಪ್ರ ಸಮಾಜದವರು ಶ್ರೀಗಳು ಇರುವ ರಾಘವೇಂದ್ರಾಚಾರ್ ಮನೆಗೆ ತೆರಳಿ, ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪಳದ ರಾಘವೇಂದ್ರ ಮಠವನ್ನು ಮಂತ್ರಾಲಯದ ಮಠದ ಸುರ್ಪದಿಗೆ ಹಂತ ಹಂತವಾಗಿ ಪಡೆಯಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಅವಕಾಶ ನೀಡುವುದಿಲ್ಲ.

ಬಳಿಕ ಮರಳಿ ಕೊಪ್ಪಳದ ರಾಘವೇಂದ್ರ ಮಠಕ್ಕೆ ಬಂದ ಕೊಪ್ಪಳದ ವಿಪ್ರ ಮುಖಂಡರು ಮಾತನಾಡಿ, ರಾಯರ ಮಠದ ಸ್ವಾಮೀಜಿಗಳು, ಉತ್ತರಾಧಿ ಮಠದ ಸ್ವಾಮೀಜಿಗಳು ಮತ್ತು ಉಡುಪಿ ಸ್ವಾಮೀಜಿಗಳು ಬರಬಹುದು. ಪೂಜೆ ಮಾಡಬಹುದು. ಎಲ್ಲರಿಗೂ ಗೌರವಿಸಿ, ಪೂಜೆಗೆ ಅವಕಾಶ ನೀಡಲಾಗುತ್ತದೆ. ಆದರೆ ಒಂದು ಮಠಕ್ಕೆ ಕೊಪ್ಪಳದ ರಾಘವೇಂದ್ರ ಮಠ ಸೀಮಿತವಾಗುವುದು ಬೇಡ. ಮಂತ್ರಾಲಯದ ಮಠಕ್ಕೆ ಸೇರಿಲ್ಲ. ಇದು ಸ್ವತಂತ್ರ ಮಠವಾಗಿದೆ. ಮಠವನ್ನು ನಾವೆಲ್ಲರೂ ಸೇರಿ ಅಭಿವೃದ್ಧಿ ಪಡಿಸೋಣ. ಯಾರ ಹಣವನ್ನು ಪಡೆಯುವುದು ಬೇಡ. ನಗರದಲ್ಲಿರುವವರೆಲ್ಲರೂ ಸೇರಿ ಮಠವನ್ನು ಸುಸಜ್ಜಿತವಾಗಿ ನಿರ್ಮಿಸೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಮಂತ್ರಾಲಯದ ರಾಯರ ಮಠದ ಸುಬುಧೇಂದ್ರ ತೀರ್ಥರು ಮಾಧ್ಯಮದವರ ಜತೆ ಮಾತನಾಡಿ, ನಾನೂ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ೧೯೭೧ರಲ್ಲಿ ಮಂತ್ರಾಲಯದ ರಾಯರ ಮಠಕ್ಕೆ ಕೊಪ್ಪಳದ ರಾಘವೇಂದ್ರ ಮಠವನ್ನು ಸುಪರ್ದಿಗೆ ಕೊಟ್ಟ ದಾಖಲೆಗಳಿವೆ ಎಂದು ಹೇಳಿದರು.


ಸುಬುಧೇಂದ್ರರ ಗುರುವಾರದ ಎಲ್ಲ ಕಾರ್ಯಕ್ರಮ ರದ್ದು

ಮಂತ್ರಾಲಯದ ರಾಯರ ಮಠಕ್ಕೆ ಕೊಪ್ಪಳ ಮಠ ಸೇರಿದೆ ಎಂಬ ಹೇಳಿಕೆಯಿಂದ ಜನರು ಆಕ್ರೋಶಗೊಂಡಿದ್ದಕ್ಕಾಗಿ ಗುರುವಾರ ಸಂಜೆಯವರು ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.

ಮಾರ್ಚ್ 27ರಂದು ಬೆಳಿಗ್ಗೆ 8.30ಕ್ಕೆ ಸಾಮೂಹಿಕ ಪಾದಪೂಜಾ ಕಾರ್ಯಕ್ರಮ, 11.೩೦ಕ್ಕೆ ಸ್ವಾಮೀಜಿಗಳಿಂದ ಮೂಲರಾಮದೇವರ ಪೂಜೆ ಕಾರ್ಯಕ್ರಮ, ಬಳಿಕ ನೈವೇದ್ಯ, ಹಸ್ತೋದಕ, ತೀರ್ಥ, ಪ್ರಸಾದ, ಸಂಜೆ 7ಕ್ಕೆ ಸುಭುದೇಂದ್ರ ಶ್ರೀಗಳ ತುಲಾಭಾರ ಕಾರ್ಯಕ್ರಮ ಹಾಗೂ ಫಲ ಮಂತ್ರಾಕ್ಷತೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಬದಲಿಗೆ ಗುರುವಾರ ಬೆಳಿಗ್ಗೆ ೬.೩೦ಕ್ಕೆ ನಗರದ ರಾಘವೇಂದ್ರ ಮಠಕ್ಕೆ ಬಂದು, ಮಂಗಳಾರತಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.