ಹುಬ್ಬಳ್ಳಿ: ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸಭೆಯ ತೀರ್ಮಾನಕ್ಕೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಕೇಶ್ವಾಪುರ ಸರ್ವೋದಯ ವೃತ್ತದ ಬಳಿಯ ೨೫ ಗುಂಟೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ, ಕಚೇರಿ ನಿರ್ಮಾಣಕ್ಕೆ ಕಾಂಗ್ರೆಸ್ ಸಿದ್ಧತೆ ನಡೆಸಿತ್ತು. ಅಲ್ಲದೆ, ಸಂಪುಟ ಸಭೆಯಲ್ಲಿ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು. ಆದರೆ, ಈ ಪ್ರಯತ್ನಕ್ಕೆ ಆರಂಭಿಕ ಹಿನ್ನಡೆ ಉಂಟಾಗಿದೆ.
ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ಹು-ಧಾ ಮಹಾನಗರ ಪಾಲಿಕೆ ಮೀಸಲಿರಿಸಿದ್ದ ೨೫ ಗುಂಟೆ ಜಾಗೆಯನ್ನು ಅತ್ಯಂತ ಕಡಿಮೆ ಬೆಲೆಗೆ ಮಂಜೂರು ಮಾಡಿಸಿಕೊಳ್ಳಲಾಗಿತ್ತು. ಅಲ್ಲದೆ, ಶೇ. ೫ರಷ್ಟು ಹಣವನ್ನು ಪಾಲಿಕೆಗೆ ನೀಡಿ ಹಕ್ಕು ಬಿಟ್ಟುಕೊಡುವಂತೆ ಪಾಲಿಕೆಯ ಮೇಲೆ ಒತ್ತಡ ಹೇರಲಾಗಿತ್ತು. ಇದಕ್ಕೆ ಈ ಹಿಂದಿನ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಹಸಿರು ನಿಶಾನೆ ತೋರಿದ್ದರು.
ಸರ್ಕಾರದ ಮತ್ತು ಪಾಲಿಕೆಯ ಆಯುಕ್ತರ ನಿಲುವನ್ನು ಪ್ರಶ್ನಿಸಿ ಪಾಲಿಕೆಯ ಸದಸ್ಯರಾದ ಸಂತೋಷ ಚವ್ಹಾಣ ಹಾಗೂ ಬೀರಪ್ಪ ಖಂಡೇಕರ್ ನ್ಯಾಯಾಲಯದ ಕದ ತಟ್ಟಿದ್ದರು. ಇದರ ಫಲವಾಗಿ ನ್ಯಾಯಾಲಯ, ಸಂಪುಟ ಸಭೆಯ ತೀರ್ಮಾನಕ್ಕೆ ತಡೆಯಾಜ್ಞೆ ನೀಡಿದೆ.
ವಿವಾದಿತ ಪ್ರದೇಶ ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಭೂಮಿಯಾಗಿದ್ದು, ಪಾಲಿಕೆಗೂ ಸಂಬಂಧಿಸಿದ್ದಲ್ಲ. ದಾಖಲೆಗಳ ಪ್ರಕಾರ ಇದೊಂದು ಇನಾಮು ಭೂಮಿಯಾಗಿದ್ದು, ಸಾರ್ವಜನಿಕರಿಗೆ ನಿರ್ಬಂಧಿತ ಪ್ರದೇಶವಾಗಿದೆ ಎಂದು ತಡೆಯಾಜ್ಞೆ ಪ್ರತಿಯಲ್ಲಿ ಉಲ್ಲೇಖಿಸಿದೆ.