ಧಾರವಾಡ: ಮಿಷನ್ ವಿದ್ಯಾ ಕಾಶಿ ಯೋಜನೆಯ ಯಶಸ್ವಿಗೆ ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಸಾಥ್ ನೀಡುತ್ತಿದ್ದಾರೆ. ಇದಕ್ಕೆ ಪ್ರೇರಣೆ ಎನ್ನುವಂತೆ ಮಾರ್ಚ್ 21 ರ ಮೊದಲ ದಿನದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗುವ 4 ಗಂಟೆ ಮೊದಲು ನವಲಗುಂದ ಪಟ್ಟಣದ ಗಾಂಧಿ ಬಜಾರ ಬಳಿಯ ಶಬಾನಾ ಪಠಾಸು ಅವರ ತಂದೆ ನೂರಹುಸೇನ ಪಠಾಸು ಅವರು ಮರಣ ಹೊಂದಿದ್ದರು. ಪರೀಕ್ಷೆ ಬರೆದು ಬಂದ ನಂತರ ತಂದೆಯ ಅಂತಿಮ ಕ್ರಿಯೆಯಲ್ಲಿ ಶಬಾನಾ ಭಾಗವಹಿಸಿದ್ದಳು.
ತಂದೆಯ ಮರಣದಿಂದ ದೃತಿಗೆಡದೆ, ಸಾವಿನ ನೋವಿನ ಮಧ್ಯೆಯೂ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು, ಧೈರ್ಯ ತೋರಿ, ಶಬಾನಾ ಇತರ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾಳೆ. ಈ ವಿದ್ಯಾರ್ಥಿನಿಯ ನಡೆ ಮೆಚ್ಚಿ, ಧೈರ್ಯ ತುಂಬಿ ಅವಳ ಓದಿಗೆ ನೆರವು, ಸಹಕಾರ ನೀಡಲು ಸ್ವತಃ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಹಾಗೂ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಇಂದು (ಮಾ.26) ಮಧ್ಯಾಹ್ನ, ಶಾಬಾನಾ ಮನೆಗೆ ಭೇಟಿ ನೀಡಿ, ಶಬಾನಾ ಹಾಗೂ ಅವಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಶಾಸಕ ಎನ್.ಎಚ್. ಕೋನರಡ್ಡಿ ಅವರು ಮುಂದಿನ ಮೂರು ತಿಂಗಳಲ್ಲಿ ಆಶ್ರಯ ಮನೆ ಕಟ್ಟಿಸಿ ಕೊಡುವ ಭರವಸೆ ನೀಡಿ, ಅಲ್ಲಿಯವರೆಗೆ ಶಬಾನಾ ಅವರಿಗೆ ಮನೆ ಬಾಡಿಗೆ ಮೊತ್ತವನ್ನು ಸ್ಥಳದಲ್ಲಿಯೇ ಸ್ವಂತ ಹಣದಲ್ಲಿ ನೀಡಿದರು.
ಅತಂತ್ರವಾದ ಶಬಾನಾ ಕುಟುಂಬಕ್ಕೆ ಭರವಸೆ ಮೂಡಿಸಿದ ಜಿಲ್ಲಾಡಳಿತ: ನವಲಗುಂದ ಸರಕಾರಿ ಉರ್ದು ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಶಬಾನಾ ಅವರು ಮೃತ ನೂರಹುಸೇನ ಹಾಗೂ ಜನ್ನತಬಿ ಪಠಾಸು ಅವರ ಮೊದಲ ಮಗಳು. ಹಳ್ಳಿಗಳಲ್ಲಿ ದ್ವಿಚಕ್ರವಾಹನದ ಮೇಲೆ ತಿರುಗಾಡಿ ರಗ್ಗು, ಹಾಸಿಗೆ ಹೊದಿಕೆ, ದಿಂಬು ಮಾರಾಟ ಮಾಡುತ್ತಿದ್ದ ತಂದೆಯ ದುಡಿಮೆಯೇ ಇವರ ಕುಟುಂಬಕ್ಕೆ ಆಸರೆ.
ತಾಯಿ ಜನ್ನತಬಿ ಮಾನಸಿಕ ಅಸ್ಥವ್ಯಸ್ಥೆ. ಅಲ್ಲದೆ ಶಬಾನಾಗೆ ಮೂರು ಜನ ಸಹೋದರಿಯರಿದ್ದು, ಕೌಸರ್ 2ನೇ, ಶಬನಮ್ 4ನೇ ಹಾಗೂ ಮಾಶಾಬಿ 8ನೇ ತರಗತಿಯಲ್ಲಿ ಓದುತ್ತಿದ್ದಾರೆ. ಇವರೆಲ್ಲ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದು, ಇವರಿಗೆ ಸ್ವಂತ ಮನೆಯೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಬಾನಾ ಕುಟುಂಬ ಅತಂತ್ರವಾಗಿದೆ. ಕಳೆದ ಒಂದು ವಾರದಿಂದ ತಾಯಿಯ ಸಹೋದರ ಇವರನ್ನು ಜೋಪಾನ ಮಾಡುತ್ತಿದ್ದಾನೆ. ಈ ಎಲ್ಲ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತೃಹೃದಯಿಯಾಗಿ ಶಬಾನಾ ಕುಟುಂಬಕ್ಕೆ ಸರಕಾರದ ನೆರವು ಹಾಗೂ ಮಾನಸಿಕ ಬೆಂಬಲ, ಧೈರ್ಯ ಸ್ಥೈರ್ಯಗಳನ್ನು ತುಂಬಿದ್ದಾರೆ. ಜಿಲ್ಲಾಡಳಿತ ತಮ್ಮ ಕುಟುಂಬದೊಂದಿಗೆ ಇದ್ದು, ಸಹಾಯ ಮಾಡುವ ಭರವಸೆಯನ್ನು ಜಿಲ್ಲಾಡಳಿತದಿಂದ ನೀಡಿದ್ದಾರೆ.
ಮನೆ, ಆರ್ಥಿಕ ನೆರವಿನ ಭರವಸೆ: ಸ್ಥಳೀಯ ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಶಬಾನಾ ಕುಟುಂಬಕ್ಕೆ ಆದ್ಯತೆ ಮೇಲೆ ಆಶ್ರಯ ಮನೆ ಮಂಜೂರಿ ಮಾಡಿದ್ದಾರೆ. ಫಲನಾಭವಿ ಪಾಲಿನ ರೂ. 1 ಲಕ್ಷ ಹಣವನ್ನು ತಾವು ಇತರ ನೆರವಿನಿಂದ ಸ್ವತಃ ಭರಿಸಿ, ಮುಂದಿನ ಮೂರು ತಿಂಗಳಲ್ಲಿ ಮನೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದರು.
ತಕ್ಕಮಟ್ಟಿಗೆ ಶಬಾನಾ ಕುಟುಂಬಕ್ಕೆ ಸಧ್ಯಕ್ಕೆ ಆರ್ಥಿಕ ಸಹಾಯವಾಗಲು ಪಶುಪಾಲನೆ ಇಲಾಖೆಯಿಂದ ನಾಟಿ ಕೋಳಿ ಸಾಕಾಣಿಕೆ ಯೋಜನೆಯಡಿ ಶಬಾನಾ ತಾಯಿಯನ್ನು ಫಲಾನುಭವಿಯಾಗಿ ಶಾಸಕ ಎನ್.ಎಚ್.ಕೋನರಡ್ಡಿ ಅವರು ಆಯ್ಕೆ ಮಾಡಿ, ತಕ್ಷಣ 20 ನಾಟಿ ಕೋಳಿ ಮರಿಗಳನ್ನು ಮತ್ತು ಮುಂದಿನ ದಿನಗಳಲ್ಲಿ 80 ನಾಟಿ ಕೋಳಿ ಮರಿಗಳನ್ನು ನೀಡುವುದಾಗಿ ತಿಳಿಸಿ, ಆದೇಶ ಪತ್ರವನ್ನು ಶಬಾನಾ ಮತ್ತು ಅವರ ತಾಯಿ ಜನ್ನತಬಿಗೆ ಸ್ಥಳದಲ್ಲಿಯೇ ವಿತರಿಸಿ, ಸಾಂತ್ವನ, ಧೈರ್ಯ ಹೇಳಿದರು.
ಸ್ಥಳದಲ್ಲಿ ವಿಧವಾ ಮಾಸಾಶನ ಮಂಜೂರು ಮಾಡಿದ ಡಿ.ಸಿ.: ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ವಿಶೇಷ ಕಾಳಜಿ ಮತ್ತು ಕಳಕಳಿಯಿಂದ ಇಂದು ನವಲಗುಂದ ತಹಶೀಲ್ದಾರರು ಶಬಾನಾ ತಾಯಿ ಜನ್ನತಬಿಗೆ ಒಂದೇ ದಿನದಲ್ಲಿ ವಿಧವಾ ಮಾಸಾಶನ ಮಂಜೂರಾತಿ ಮಾಡಿ ಆದೇಶ ಪತ್ರ್ರ ನೀಡಿದರು. ರಾಷ್ಟ್ರೀಯ ಕೌಟುಂಬಿಕ ನೆರವು ಯೋಜನೆಯಡಿ ಮನೆಯ ಮುಖ್ಯಸ್ಥ ಮರಣಿಸಿದಾಗ ಸೀಗುವ ರೂ. 20 ಸಾವಿರ ಸಹಾಯಧನದ ಅರ್ಜಿಗೆ ಅನುಮೋದನೆ ನೀಡಿ, ಜನ್ನತಬಿಗೆ ಹೊಸದಾಗಿ ಬ್ಯಾಂಕ್ ಖಾತೆ ಮಾಡಿಸಿ, ತಕ್ಷಣ ಜಮೆ ಮಾಡಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಹಶೀಲ್ದಾರ ಸುಧೀರ ಸಾಹುಕಾರ ಅವರಿಗೆ ಸೂಚಿಸಿದರು.
ಮಕ್ಕಳ ರಕ್ಷಣಾ ಘಟಕದಿಂದ ಎಕಪೋಷಕರ ಯೋಜನೆಯಡಿ ಶಬಾನಾ ಹಾಗೂ ಅವರ ತಂಗಿಗೆ ಪ್ರತಿ ತಿಂಗಳೂ ತಲಾ ರೂ. 2 ಸಾವಿರ ಶಿಷ್ಯ ವೇತನ ಸೀಗುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮತ್ತು ಶಬಾನಾ ಹಾಗೂ ಅವರ ಸಹೋದರಿಯರಿಗೆ ನವಲಗುಂದ ಪಟ್ಟಣದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉಚಿತ ಪ್ರವೇಶ ಸೇರಿದಂತೆ ಎಲ್ಲ ಸರಕಾರಿ ಸೌಲಭ್ಯಗಳನ್ನು ನೀಡುವುದಾಗಿ ಮತ್ತು ಮಾನಸಿಕ ಕಾಯಿಲೆ ಇರುವ ಶಬಾನಾ ತಾಯಿ ಜನ್ನತಬಿಗೆ ಅಗತ್ಯವಿರುವ ಉಚಿತ ಚಿಕಿತ್ಸೆ, ಔಷಧಿಯನ್ನು ಆರೋಗ್ಯ ಇಲಾಖೆಯಿಂದ ನೀಡುವುದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಶಬಾನಾ ಕುಟುಂಬ ಸದಸ್ಯರಿಗೆ ತಿಳಿಸಿದರು.
ಯಾವುದೇ ಕಾರಣಕ್ಕೂ ಶಬಾನಾ ಹಾಗೂ ಅವಳ ಸಹೋದರಿಯರು ಶಿಕ್ಷಣದಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಶಬಾನಾ ಹಾಗೂ ಅವಳ ಸಹೋದರಿಯರಿಗೆ ಅಗತ್ಯ ನೆರವು ನೀಡಲಿದೆ ಎಂದು ಹೇಳಿ ಶಬಾನಾ ಕುಟುಂಬವನ್ನು ಜಿಲ್ಲಾಧಿಕಾರಿ ಹಾಗೂ ಸಿಇಓ ಅವರು ಸಂತೈಸಿದರು.
ಶಬಾನಾ ಮನೆಗೆ ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ, ನವಲಗುಂದ ತಹಶೀಲ್ದಾರ ಸುಧೀರ ಸಾವಕಾರ, ಅಣ್ಣಿಗೇರಿ ತಹಶೀಲ್ದಾರ ಎಮ್.ಜಿ. ದಾಸಪ್ಪನವರ, ಹಿಂದುಗಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಎಸ್.ಆರ್.ಗಣಾಚಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಮ್.ಬಿ.ಹೊಸಮನಿ, ಸಿಡಿಪಿಓ ಗಾಯತ್ರಿ ಪಾಟೀಲ, ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಎಮ್.ಪಿ.ದ್ಯಾಬೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ. ಮಲ್ಲಾಡದ, ಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸ, ಸ್ಥಾಯಿ ಸಮಿತಿಯ ಅಧ್ಯಕ್ಷ ಹನುಮಂತ ವಾಲಿಕಾರ, ಪುರಸಭೆ ಸದಸ್ಯ ಮಾಹಂತೇಶ ಕಲಾಲ ಮತ್ತು ಪುರಸಭೆಯ ಸದಸ್ಯರು, ಪಿಎಸ್‍ಐ ಜನಾರ್ಧನ ಬಟ್ಟಿರಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.