ನಕಲಿ ಅಂಕಪಟ್ಟಿ ಜಾಲ: ಮೂವರು ವಶಕ್ಕೆ

0
26

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಎಸ್‌ಎಸ್‌ಎಲ್‌ಸಿ ನಕಲಿ ಅಂಕಪಟ್ಟಿ ಜಾಲವನ್ನು ಭೇದಿಸಿದ ಬೆಂಗಳೂರಿನ ಸಿಸಿಬಿ ಪೊಲೀಸರು ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಲ್ಲಿನ ಶ್ರೀನಗರದಲ್ಲಿ ಬುಧವಾರ ಬೆಳಗ್ಗೆ ಪ್ರಶಾಂತ ಎಂಬುವವರ ಕಚೇರಿಗೆ ದಾಳಿ ನಡೆಸಿದ ಪೊಲೀಸರು ಸುಮಾರು 350 ಎಸ್‌ಎಸ್‌ಎಲ್‌ಸಿ ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ. ಅವರಲ್ಲಿ ಪ್ರಶಾಂತ ಅಲ್ಲದೇ ಗದಗ ಹಾಗೂ ಬೆಂಗಳೂರು ಮೂಲದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಅಂಕಪಟ್ಟಿಗಳಲ್ಲಿ ಹಿಂದಿನ ವರ್ಷಗಳ ಅಂಕಪಟ್ಟಿಗಳು ಸೇರಿವೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಸುಧಾರಣೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಿಷನ್ ವಿದ್ಯಾಕಾಶಿ ಅಭಿಯಾನ ಕೈಗೊಂಡಿದ್ದು, ಕಳೆದ ಬಾರಿ ರಾಜ್ಯದಲ್ಲಿ 23ನೇ ಸ್ಥಾನದಲ್ಲಿದ್ದ ಧಾರವಾಡ ಜಿಲ್ಲೆ ಈ ಬಾರಿ ಟಾಪ್-೧೦ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕೆಂದು ಪ್ರಯತ್ನಿಸಿದ್ದಾರೆ. ಜಿಲ್ಲೆ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಬಹುದೆಂಬ ನಿರೀಕ್ಷೆಯಲ್ಲಿರುವಾಗ ನಗರದಲ್ಲಿ ನಕಲಿ ಅಂಕಪಟ್ಟಿ ಜಾಲ ಬಹಿರಂಗಗೊಂಡಿದೆ. ಶಿಕ್ಷಕರು ಸೇರಿದಂತೆ ಹಲವರು ಜಾಲದ ಭಾಗವಾಗಿದ್ದಾರೆ ಎಂದು ಶಂಕಿಸಲಾಗಿದ್ದು, ನಕಲಿ ಅಂಕಪಟ್ಟಿ ಜಾಲದಲ್ಲಿರುವ ಇತರ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯದ ಇತರೆಡೆ ದಾಳಿ ನಡೆಸಲಾಗಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸುತ್ತಿದ್ದ ಹಲವರನ್ನು ಬಂಧಿಸಲಾಗಿದೆ. ನಕಲಿ ಅಂಕಪಟ್ಟಿ ಜಾಲ ಹಲವು ವರ್ಷಗಳಿಂದ ಕ್ರಿಯಾಶೀಲವಾಗಿದ್ದು, ಖೊಟ್ಟಿ ಅಂಕಪಟ್ಟಿಗಳನ್ನು ಪಡೆದುಕೊಂಡೇ ಕೆಲವರು ಸರಕಾರಿ ನೌಕರಿ ಅಲ್ಲದೇ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ.

Previous articleಪ್ರೇಮವೈಫಲ್ಯ: ಯುವತಿ ಆತ್ಮಹತ್ಯೆ
Next articleವಿಶ್ವ ದಾಖಲೆ ಸೃಷ್ಟಿಸಿದ ಮೌಂಟ್ ರೂಫಿಂಗ್: 64 ಗಂಟೆಯಲ್ಲಿ 1.2 ಲಕ್ಷ ಚದರಡಿ ಕೈಗಾರಿಕಾ ಶೆಡ್ ನಿರ್ಮಾಣ