ಹರಿಹರ: ಗ್ರಾಮದೇವತೆ ಜಾತ್ರೆ ನಿಮಿತ್ತ ನಗರದಲ್ಲಿ ಗುರುವಾರ ಆಯೋಜಿಸಿದ್ದ ಬೆಲ್ಲದ ಬಂಡಿ ಮೆರವಣಿಗೆಯಲ್ಲಿ ಹೋರಿಯೊಂದು ಬೆದರಿ ಮೆರವಣಿಗೆ ನೋಡುತ್ತ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಗುದ್ದಿದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ತಾಲ್ಲೂಕಿನ ರಾಮತೀರ್ಥ ಗ್ರಾಮದ, ಘಟವಾಧ್ಯ ಕಲಾವಿದ ವೀರಾಚಾರಿ(72) ಸಾವಿಗೀಡಾದ ವ್ಯಕ್ತಿ. ಉತ್ಸವದ ಅಂಗವಾಗಿ ಗುರುವಾರ ಸಂಜೆ ನಗರದಲ್ಲಿ ಆರಂಭವಾಗಿದ್ದ ಎತ್ತುಗಳು ಮತ್ತು ಅಲಂಕೃತ ಬೆಲ್ಲದ ಬಂಡಿಯ ಮೆರವಣಿಗೆ ಬೊಂಗಾಳೆ ವೃತ್ತಕ್ಕೆ ಬಂದಾಗ ಮೆರವಣಿಗೆಯಲ್ಲಿನ ಎತ್ತೊಂದು ಬೆದರಿ ನಿಂತಿದ್ದ ಜನರ ಮಧ್ಯೆ ನುಗ್ಗಿತ್ತು. ಈ ವೇಳೆ ಮೆರವಣಿಗೆ ನೋಡುತ್ತಾ ನಿಂತಿದ್ದ ವೀರಾಚಾರಿಗೆ ಗುದ್ದಿದ್ದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.