ರಾಯಚೂರು: ದೇವರ ಚಿನ್ನದ ಪಾದಗಳು ಕಿರೀಟ ಸೇರಿದಂತೆ 30 ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿರುವ ಘಟನೆ ಸಿರವಾರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಕಲ್ಲೂರು ಗ್ರಾಮದ ಶ್ರೀಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ವೆಂಕಟೇಶ್ವರ ದೇವರ ೮೦ ಗ್ರಾಂ ಚಿನ್ನದ ಕಿರೀಟ, ಲಕ್ಷ್ಮೀದೇವಿಗೆ ಹಾಕಿದ್ದ ೩೦ ಗ್ರಾಂ ಚಿನ್ನದ ಕಿರೀಟ, ೧೪೦ ಗ್ರಾಂ ತೂಕದ ಪಾದಗಳು, ೪೦ ಗ್ರಾಂನಷ್ಟಿರುವ ಪದಕ ಸೇರಿದಂತೆ ಒಟ್ಟು ಸುಮಾರು ೩೦ಲಕ್ಷಕ್ಕೂ ಹೆಚ್ಚು ಮೌಲ್ಯದ ೩೦೦ ಗ್ರಾಂಕ್ಕೂ ಹೆಚ್ಚು ಚಿನ್ನಾಭರಣ ಕಳ್ಳತನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲ್ಲೂರು ಮಹಾಲಕ್ಷ್ಮೀ ದೇವಸ್ಥಾನದ ಮುಖ್ಯದ್ವಾರದ ಬೀಗ ಮುರಿದು ಹಾಕಿ ದೇವಸ್ಥಾನದೊಳಗೆ ಹೊಕ್ಕ ದುಷ್ಕರ್ಮಿಗಳು ದೇವಸ್ಥಾನದ ಗರ್ಭಗುಡಿಯ ಬೀಗವನ್ನು ಮುರಿದಿದ್ದಾರೆ. ಗರ್ಭಗುಡಿಯಲ್ಲಿ ಹೋಗಿ ದೇವರ ಮೇಲಿದ್ದ ಎಲ್ಲ ಚಿನ್ನಾಭರಣ ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಪುಟ್ಟಮಾದಯ್ಯ ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ಜಿ.ಹರೀಶ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಿಪಿಐ ಶಶಿಕಾಂತ ಹಾಗೂ ಸಿರವಾರ ಪಿಎಸ್‌ಐ ಅವರು ಸ್ಥಳಕ್ಕೆ ಆಗಮಿಸಿದ್ದರು.