ವಿಜಯಪುರ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದ್ದು ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಕೊಲ್ಹಾರ ರಸ್ತೆಯಲ್ಲಿ ಅನಧಿಕೃತ ಮದ್ಯವನ್ನು ರಟ್ಟಿನ ಬಾಕ್ಸ್‌ಗಳಲ್ಲಿಟ್ಟು ಮಾರಾಟ ಮಾಡುತ್ತಿದ್ದ ಉಡುಪಿ ಮೂಲದ ಸಂದೀಪ ಶಂಕರ ಗಾಣಿಗ ಎಂಬುವವನನ್ನು ಬಂಧಿಸಲಾಗಿದೆ. ಈ ಕುರಿತು ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂಡಿ ಬೈಪಾಸ್ ರಸ್ತೆಯ ವೈಭವ ಢಾಬಾದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವಿಜಯಪುರ ಪರಮೇಶ್ವರ ನಗರದ ಪರಶುರಾಮ ಅರ್ಜುನ ಲಮಾಣಿ ಎಂಬುವವನನ್ನು ಬಂಧಿಸಿರುವ ಪೊಲೀಸರು ಅಕ್ರಮ ಮದ್ಯ ಜಪ್ತಿ ಮಾಡಿದ್ದಾರೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸವನ ಬಾಗೇವಾಡಿಯ ಟೂರಿಸ್ಟ್ ವೈನ್‌ಶಾಪ್ ಮಾಲಿಕನೊಂದಿಗೆ ಸೇರಿ ವೀರೇಶ ಮಹಾದೇವ ಕ್ಯಾತನ್ನವರ ಎಂಬುವವನು ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಬಂಧಿಸಲಾಗಿದೆ. ವೈನ್‌ಶಾಪ್ ಮಾಲಿಕನ ಹೆಸರು ಪತ್ತೆಯಾಗಿಲ್ಲ. ಈ ಕುರಿತು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಡವಲಗಾದ ಸಾಲೋಟಗಿ ವೈನ್‌ಶಾಪ್ ಮ್ಯಾನೇಜರ್ ಎನ್ನಲಾದ ಬಾಬುರಾಯ ಶರಣಪ್ಪ ಮಡ್ನಳ್ಳಿ ಎಂಬುವನು ಜೋಡ ಗುಡಿ ಹತ್ತಿರ ಅಕ್ರಮ ಮದ್ಯ ಮಾರಾಟ ಮಾಡುವಾಗ ಸಿಕ್ಕಿ ಬಿದ್ದಿದ್ದಾನೆ. ಈ ಕುರಿತು ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಶ್ಯಾಳ ಪಿ.ಬಿ. ಗ್ರಾಮದ ಬಸ್ ನಿಲ್ದಾಣದ ಸಮೀಪದ ಸಂಗಮೇಶ್ವರ ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಬಸವರಾಜ ರಾಮಣ್ಣ ಆಲೂರ ಎಂಬವವನನ್ನು ಬಂಧಿಸಿದ್ದಾರೆ. ಈ ಕುರಿತು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲ್ಹಾರದ ಯುಕೆಪಿ ಬಳಿ ಕ್ರಾಸ್ ಬಳಿ ಪತ್ರಾಸ್ ಶೆಡ್‌ನಲ್ಲಿ ಅಕ್ರಮ ಮದ್ಯವನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಮೂವರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ನಾಗರಾಳದ ಕೃಷ್ಣ ಪ್ರಹ್ಲಾದ ಗೊಳಗಿ ಹಣಮಂತ ಶಿವಪ್ಪ ಗುಡ್ಡಪ್ಪಗೋಳ, ಮಮದಾಪುರದ ಲಕ್ಷಣ ರಾವುತಪ್ಪ ಕೋಲಕಾರ ಎಂದು ಗುರುತಿಸಲಾಗಿದೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.