ಕಾಮ ಮತ್ತು ಕ್ರೋಧ ಮಾನವನನ್ನು ಅಧೋಗತಿಗೆ ಕೊಂಡೊಯ್ಯುವ ಪ್ರಬಲ ದೌರ್ಬಲ್ಯಗಳು. ಇವುಗಳನ್ನು ನಿಯಂತ್ರಿಸುವುದು ಆಧ್ಯಾತ್ಮಿಕ ಮತ್ತು ವೈಯಕ್ತಿಕ ವಿಕಾಸಕ್ಕಾಗಿ ಅತ್ಯಗತ್ಯವಾಗಿ ಪ್ರತಿಯೊಬ್ಬರೂ ಮಾಡಲೇಬೇಕು.
ಕಾಮದಿಂದ ಲೋಭ, ಅತೃಪ್ತಿ, ಮತ್ತು ಅಶಾಂತಿ ಜಾಸ್ತಿಯಾಗುತ್ತದೆ. ಒಂದು ಇಚ್ಛೆ ಪೂರ್ತಿಯಾಗಿದಂತೆ ಮತ್ತೊಂದು ಹುಟ್ಟಿಕೊಳ್ಳುತ್ತದೆ. ಮಿತಿಮೀರಿದ ಕಾಮ ಇತರರನ್ನು ಹಾನಿ ಮಾಡುವಂತೆ ಪ್ರೇರೇಪಿಸಬಹುದು. ಇನ್ನು ಕ್ರೋಧದಿಂದ ಆತ್ಮನಿಯಂತ್ರಣ ಇಲ್ಲದೆ, ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಡಚಣೆ ಆಗಬಹುದು. ಜೊತೆಗೆ ಕೋಪ ದೇಹದ ಆರೋಗ್ಯಕ್ಕೂ ಹಾನಿಕಾರಕ. ಕಾಮ ಮತ್ತು ಕ್ರೋಧ ರಜೋಗುಣದಿಂದ ಹುಟ್ಟುತ್ತವೆ; ಇವು ಮಹಾ ಅಪಾಯಕಾರಿ ಮತ್ತು ಮಹಾ ಪಾಪಕರ.
ಭಗವದ್ಗೀತೆ ೨.೬೨-೬೩: ತಿಳಿಸಿದಂತೆ “ಕಾಮದಿಂದ ಕ್ರೋಧ ಹುಟ್ಟುತ್ತದೆ, ಕ್ರೋಧದಿಂದ ಭ್ರಮೆ, ಭ್ರಮೆಯಿಂದ ಸ್ಮೃತಿ ನಾಶ, ಸ್ಮೃತಿ ನಾಶದಿಂದ ಬುದ್ಧಿ ನಾಶ, ಮತ್ತು ಬುದ್ಧಿ ನಾಶವಾದಾಗ ವ್ಯಕ್ತಿ ನಾಶವಾಗುತ್ತಾನೆ.”
ಇದರಿಂದ, ಕಾಮ ಮತ್ತು ಕ್ರೋಧ ನಿಯಂತ್ರಿಸಲು ಬುದ್ಧಿಯ ಶಕ್ತಿಯನ್ನು ಉಪಯೋಗಿಸಬೇಕು. ಬುದ್ಧಿ ಸ್ಥಿಮಿತದಲ್ಲಿಡಲು ಎಲ್ಲಾ ಇಂದ್ರಿಯಗಳನ್ನು ಹತೋಟಿಯಲ್ಲಿ ಡಬೇಕು. ಇಂದ್ರಿಯ ನಿಗ್ರಹದಿಂದ ಮಾತ್ರ ಇಂತಹ ಕಾಮ, ಕ್ರೋಧ, ಲೋಭ, ಮದ, ಮತ್ಸರದ ದಾಸ್ಯತ್ವದಿಂದ ಬಿಡುಗಡೆ ಹೊಂದಲು ಸಾಧ್ಯ.
ಕೋಪ ಬಂದಾಗ ೧೦ ಸೆಕೆಂಡುಗಳ ಕಾಲ ಉಸಿರಾಟವನ್ನು ನಿಯಂತ್ರಿಸಿ. ಯೋಚನೆ ಮತ್ತು ನಿರ್ಧಾರ ತಕ್ಷಣ ತೆಗೆದುಕೊಳ್ಳದೆ ಸ್ವಲ್ಪ ಸಮಯ ಕಾಯುವುದು ಒಳಿತು. ದೇವರನಾಮಗಳು ಓದುವುದು, ಕೇಳುವುದು ಹಾಗೂ ಹಾಡುವುದು ಮುಂತಾದ ವಿಧಾನಗಳನ್ನು ಅನುಸರಿಸಿ ಬುದ್ಧಿ ಶಾಂತ ಚಿತ್ತದಿಂದ ಇರುವಂತೆ ಮಾಡುವುದು ಶ್ರೇಯಸ್ಕರ.
ದೇವರಮೇಲೆ ಅಪಾರ ಭಕ್ತಿ ಮತ್ತು ಪ್ರಾರ್ಥನೆ ಮನಸ್ಸಿಗೆ ಶಾಂತಿ ತರುವುದರ ಜೊತೆಗೆ ಭಗವಂತನ ನಾಮಸ್ಮರಣೆ ಅಥವಾ ಜಪ ಮಾಡುವುದು ಅಶಾಂತಿ ಕಡಿಮೆಯಾಗಲು ಸಹಾಯ ಮಾಡುತ್ತದೆ.
ಆಧ್ಯಾತ್ಮಿಕ ಜ್ಞಾನ ಪಡೆಯುವುದು, ಜ್ಞಾನಿಗಳ ಮಾತು ಕೇಳುವುದು. ಪ್ರತಿದಿನ ಆತ್ಮಾವಲೋಕನ ಮಾಡಿಕೊಳ್ಳುವುದರಿಂದ ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧ್ಯ.
ಪ್ರಾಣಾಯಾಮ, ಉಸಿರಾಟದ ನಿಯಂತ್ರಣದಿಂದ, ಉತ್ತಮ ನಿದ್ರೆ ಹಾಗು ಸತ್ಸಂಗದಲ್ಲಿ ಒಳ್ಳೆಯವರೊಂದಿಗೆ ಇರಲು ಪ್ರಯತ್ನಿಸುವುದರಿಂದ. ಸತ್ಯ, ಅಹಿಂಸೆ, ತ್ಯಾಗ, ಧ್ಯಾನ, ಜಪ ಮತ್ತು ಪೂಜೆ ನಿತ್ಯದಲ್ಲಿ ಮಾಡಿದರೆ ಮನಸ್ಸು ಶಾಂತವಾಗಿ ಏಕಾಗ್ರತೆ ಸಾಧಿಸಲು ಸದ್ಯ. ಸಾತ್ವಿಕ ಆಹಾರ, ಸರಿಯಾದ ಮಾತು ಮತ್ತು ಸ್ಪಷ್ಟ ಚಿಂತನೆ ಏಕಾಗ್ರತೆ ಪಡೆಯಲು ಸಹಾಯ ಮಾಡುತ್ತದೆ. ಏಕಾಗ್ರತೆ ಸಾಧ್ಯವಾದರೆ ಆತ್ಮಜ್ಞಾನ ಪಡೆಯಲು ಸಹಕಾರಿ. ಇಂಥಾ ಏಕಾಗ್ರತೆ ಸಾಧಿಸಲು ಎಲ್ಲರೂ, ಯೋಗ ಧ್ಯಾನ ಪೂಜೆ ಗಳಿಂದ ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟು, ಧಾರ್ಮಿಕ ಪ್ರಜ್ಞೆ ಗಳಿಸಿ, ಜನ್ಮಸಾರ್ಥಕ ಗಳಿಸಿಕೊಳ್ಳಬೇಕು.