ಕಬ್ಬೂರು ಸರ್ಕಾರಿ ಗೋಮಾಳ-ಕೆರೆ ಒತ್ತುವರಿ: ಸಾವಿರಾರು ಅಡಿಕೆ ಮರಗಳ ತೆರವು

0
21

ದಾವಣಗೆರೆ: ಒತ್ತುವರಿಯಾಗಿದ್ದ ಸರ್ಕಾರಿ ಗೋಮಾಳ ಜಮೀನು ಮತ್ತು ಕೆರೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಲಾಗಿದೆ. ಭೂ ಮಾಪಕರು ಅಳತೆ ಮಾಡಿ ಒತ್ತುವರಿ ಮಾಡಿದ್ದ ಜಾಗದಲ್ಲಿ ಬೆಳೆದಿದ್ದ ಫಲಕ್ಕೆ ಬಂದ ಅಡಿಕೆ ಮರಗಳನ್ನು ತೆರವುಗೊಳಿಸಿದರು.
ಸರ್ಕಾರಿ ಗೋಮಾಳ ಜಮೀನು ಮತ್ತು ಕೆರೆಯನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ತಾಲೂಕಿನ ಕಬ್ಬೂರು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಬುಧವಾರ ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ತಹಶೀಲ್ದಾರ್ ಡಾ. ಅಶ್ವತ್ಥ್, ಭೂ ದಾಖಲೆಗಳ ಉಪನಿರ್ದೇಶಕಿ ಶೈಲಜಾ ಅವರ ಸಮ್ಮುಖದಲ್ಲಿ ಭೂಮಾಪಕರು ಮತ್ತು ಪರ್ಯಾವೇಕ್ಷಕರು ಅಳತೆ ಮಾಡಿದರು.
ಈ ಸಂದರ್ಭದಲ್ಲಿ ಒತ್ತುವರಿಯಾದ ಎರಡ್ಮೂರು ಎಕರೆ ಜಾಗದಲ್ಲಿ ಬೆಳೆದಿದ್ದ ಫಲಕ್ಕೆ ಬಂದಿದ್ದ ಸಾವಿರಾರು ಅಡಿಕೆ ಮರಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲಾಯಿತು. ಗೋಮಾಳ ಜಮೀನು ಮತ್ತು ಕೆರೆಯ ನಾಲ್ಕು ಭಾಗಗಳಲ್ಲಿ ಒತ್ತುವರಿಯಾಗಿದ್ದು, ಈಗ ಒಂದು ಭಾಗದಲ್ಲಿ ಮಾತ್ರ ಅಳತೆ ಮಾಡಿ ಒತ್ತುವರಿಯಾದ ಜಾಗವನ್ನು ತೆರವುಗೊಳಿಸುತ್ತಿದ್ದಾರೆ.
ಅಳತೆ ಕಾರ್ಯಾಚರಣೆ ಮುಂದುವರಿದಿದೆ. ಸಂಪೂರ್ಣ ಅಳತೆ ಮಾಡಿದ ಮೇಲೆ ವಸ್ತುನಿಷ್ಠವಾಗಿ ಹದ್ದುಬಸ್ತ್ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಂದುವಾಡ, ಒತ್ತುವರಿಯಾಗಿರುವ ಸರ್ಕಾರಿ ಗೋಮಾಳ ಜಮೀನು ಮತ್ತು ಕೆರೆಯ ಜಾಗವನ್ನು ತೆರವುಗೊಳಿಸಿ ಹದ್ದುಬಸ್ತ್ ಮಾಡುವಂತೆ ಇಡೀ ಗ್ರಾಮಸ್ಥರೇ ಹೋರಾಟ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಒಂದು ಪ್ರಭಾವಿ ಕುಟುಂಬದ ಪ್ರಭಾವಕ್ಕೊಳಗಾಗಿ ಗ್ರಾಮಸ್ಥರ ವಿರುದ್ಧವೇ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೋರಾಟದ ಪ್ರತಿಫಲವಾಗಿ ಇಂದು ಆರಂಭಿಕ ಯಶಸ್ಸು ಸಿಕ್ಕಿದೆ. ಅಳತೆ ಕಾರ್ಯ ಸಂಪೂರ್ಣಗೊಳಿಸಿದ ಮೇಲೆ ಸರ್ಕಾರಿ ಗೋಮಾಳ ಜಾಗದ ಮೂಲ ವಿಸ್ತೀರ್ಣ ಮತ್ತು ಕೆರೆಯ ಮೂಲ ವಿಸ್ತೀರ್ಣದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಅಳತೆ ಕಾರ್ಯಾಚರಣೆಯಲ್ಲಿ ಭೂಮಾಪಕರಾದ ಪ್ರಸನ್ನಕುಮಾರ್, ಕೃಪಾಕರ್ ಗೌರವಿ, ಕೃಷ್ಣಮೂರ್ತಿ, ಬಿ.ಎಲ್. ಮಂಜುನಾಥ್, ಪಿ.ಎಸ್.ಹನುಮಂತಪ್ಪ, ರಂಜನ್, ಪರ್ಯಾವೇಕ್ಷಕ ಕೆ.ಎಚ್. ರಂಗನಾಥ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್, ಕೋಟೆಪ್ಪ, ಗ್ರಾಮಸ್ಥರಾದ ಗಂಗಾಧರಣ್ಣ, ಕುಮಾರಣ್ಣ, ಚಂದ್ರಶೇಖರ್, ದೇವೇಂದ್ರಣ್ಣ, ಮಂಜುನಾಥ್ ವೈ.ಕಬ್ಬೂರು, ರಾಜಣ್ಣ, ಪ್ರಸನ್ನ, ಚಂದ್ರಪ್ಪ, ವಿರೂಪಾಕ್ಷಪ್ಪ, ಗುರುಮೂರ್ತಿ, ರಾಮಸ್ವಾಮಿ, ಧರ್ಮಣ್ಣ, ಕೆ.ಪಿ.ರಾಮಸ್ವಾಮಿ ಸೇರಿದಂತೆ ಸ್ಥಳದಲ್ಲಿ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

Previous articleಒಂಟಿ ಮಹಿಳೆ ಇದ್ದ ಬಟ್ಟೆ ಅಂಗಡಿಗೆ ನುಗ್ಗಿ ದರೋಡೆ
Next articleಜಲವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಒಂದೇ ನ್ಯಾಯ ಮಂಡಳಿ ಸ್ಥಾಪಿಸಿ