ನಾಲ್ವರು ದೀಪಧಾರಿಣಿಯರು

ಗ್ರಾಮೀಣ ಪ್ರದೇಶದಲ್ಲಿ ಹೆಂಡತಿ'ಯನ್ನು ಈಗಲೂಕುಟುಂಬ’ ಎಂತಲೇ ಕರೆಯುತ್ತಾರೆ. (ನಿಘಂಟುವಿನ ಅರ್ಥದಲ್ಲಿಯೂ ಕುಟುಂಬ, ಹೆಂಡತಿ, ಮನೆಯ ಯಜಮಾನಿ' ಎಂದೇ ಇದೆ.) ವಧುವೊಬ್ಬಳು ಮನೆಗೆ ಬಂದು, ಮನೆಯನ್ನು ಕುಟುಂಬವೆಂಬ ವಿಸ್ತಾರ ಸೌಧವನ್ನಾಗಿ ಕಟ್ಟುತ್ತಾಳೆ. ತಾನು ವಧುವಾಗಿ ಬಂದ ಮನೆಯ ತುಂಬ ಪತ್ನಿ, ಸೊಸೆ, ತಾಯಿ, ಅಜ್ಜಿ-ಹೀಗೆ ಅನೇಕ ರೂಪದಲ್ಲಿ ಬೆಳಕು ಚೆಲ್ಲಿ ಮನೆತನ ನಿರ್ಮಿಸುತ್ತಾಳೆ. ನಾಲ್ಕು ದೀಪಗಳ ದೀಪಧಾರಿಣಿ ಮಹಿಳೆಯ ಕುರಿತು ದಾರ್ಶನಿಕರು ಗಮನಾರ್ಹ ವಿಷಯವೊಂದನ್ನು ಹೇಳುತ್ತಾರೆ.ಈ ನಾಲ್ಕು ಮಹಿಳೆಯರನ್ನು ಎಂದೂ ಮರೆಯಬಾರದು. ಅವರಿಗೆ ಹೆಚ್ಚುಹೆಚ್ಚು ಗೌರವ, ಪ್ರೀತಿ ನೀಡಿ ಅವರನ್ನು ನೋಡಿಕೊಳ್ಳಬೇಕು. ಅಷ್ಟೇ ಅಲ್ಲ, ಜೀವನಪರ್ಯಂತ ಈ ನಾಲ್ಕು ಮಹಿಳೆಯರ ಪ್ರೀತಿಗೆ ಪಾತ್ರರಾಗಬೇಕು. ಅವರೆಂದರೆ ನಮಗೆ ಜನ್ಮ ನೀಡಿದ ತಾಯಿ, ನಮ್ಮೊಂದಿಗೆ ಜನಿಸಿದ ಅಕ್ಕ-ತಂಗಿ, ನಮಗಾಗಿ ಜನಿಸಿದ ಪತ್ನಿ ಹಾಗೂ ನಮ್ಮಿಂದ ಜನಿಸಿದ ಮಗಳು.’
ಎಲ್ಲ ಧರ್ಮಗಳಲ್ಲಿ ಮಹಿಳೆಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಬೋಧನೆಯಲ್ಲಿ ಮಹಿಳೆಗೆ ಗೌರವವನ್ನು ನೀಡಬೇಕೆಂದು ಆದೇಶಗಳನ್ನು ಹೊರಡಿಸಲಾಗಿದೆ. ಕುರಾನಿನಲ್ಲಿ ಮಹಿಳೆಯರನ್ನು ಕುರಿತಾದ ನಿಸಾ' ಅಂದರೆಮಹಿಳೆ’ ಎಂಬ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ೧೭೬ ವಚನಗಳ ಈ ಅಧ್ಯಾಯದ ತುಂಬೆಲ್ಲ ಮಹಿಳೆಯ ಮಹತ್ವ, ಗೌರವಾದರ, ಕರ್ತವ್ಯ ಮುಂತಾದವುಗಳನ್ನು ಕುರಿತು ಆದೇಶ ಉಪದೇಶಗಳನ್ನು ನೀಡಲಾಗಿದೆ. ಒಂದು ವಚನದಲ್ಲಿ, ಅವರ ಜೊತೆಗೆ ನಿಯಮಾನುಸಾರ ಬದುಕು ಸಾಗಿಸಿರಿ' (೪:೧೯) ಎಂದೂ, ಅಕ್ರೂಮ (೩೦:೨೧) ಅಧ್ಯಾಯದ ಒಂದು ವಚನದಲ್ಲಿ,ನೀವು ನೆಮ್ಮದಿ ಪಡೆಯಬೇಕೆಂತಲೇ ಜೋಡಿಗಳನ್ನು ಸೃಷ್ಟಿಸಿ, ನಿಮ್ಮೆಲ್ಲ ಪ್ರೀತಿ ವಾತ್ಸಲ್ಯಗಳನ್ನು ಬೆಳೆಸಿರುವುದು’ ಎಂದೂ ಹೇಳಲಾಗಿದೆ. ಪ್ರವಾದಿವರ್ಯ ಮುಹಮ್ಮದ (ಸ) ಅವರು, ಯಾರು ತಮ್ಮ ಮನೆಯವರ ಪಾಲಿಗೆ ಉತ್ತಮರೋ ಅವರೇ ನಿಮ್ಮ ಪೈಕಿ ಉತ್ತಮರು' ಎಂದಿದ್ದಾರೆ. ಇಸ್ಲಾಮ್ ಮಹಿಳೆಗೆ ಅಪೂರ್ವವಾದ ಹಕ್ಕುಗಳನ್ನು ನೀಡಿದೆ. ಅರೇಬಿಯಾದಲ್ಲಿ ಹೆಚ್ಚಾಗಿ ಹೆಣ್ಣು ಹುಟ್ಟಿದೊಡನೆ ಅದನ್ನು ಜೀವಂತ ಸಮಾಧಿ ಮಾಡುತ್ತಿದ್ದರು. ಮಹಿಳೆಯ ಕುರಿತು ಯೋಚಿಸುವಾಗ ಅದು ನಮ್ಮ ಕಣ್ಮುಂದೆ ಬರುತ್ತದೆ. ಪ್ರವಾದಿವರ್ಯ ಮುಹಮ್ಮದ (ಸ) ಅವರು ಅರಬ್ ಸಮಾಜವನ್ನು ಸುಧಾರಿಸುವ ಸಂದರ್ಭದಲ್ಲಿ ಘನತೆ, ಗೌರವ ಸಿಗುವಂತೆ ಮಾಡಿದರು. ಅಷ್ಟೇ ಅಲ್ಲ, ಕುರಾನಿನಲ್ಲಿ ಸಾರಲಾಗಿರುವ ಸಂದೇಶದಲ್ಲಿ ಅಲ್ಲಾಹನ ದೃಷ್ಟಿಯಲ್ಲಿ ಪುರುಷರು ಮಹಿಳೆಯರು ಸಮಾನ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ಆಗಲೇ ಪ್ರಸ್ತಾಪಿಸಿದಂತೆ-ಆ ನಾಲ್ಕು ಮಹಿಳೆಯರನ್ನು ಕುರಿತು ಹೇಳಿದಾಗ, ಪ್ರೀತಿ, ವಾತ್ಸಲ್ಯ ಆದರಗಳಿಗೆ ತಾಯಿಯೇ ಮುಖ್ಯವಾಗುತ್ತಾಳೆ.ತಾಯಿಯ ಪಾದದ ಕೆಳಗೆ ಸ್ವರ್ಗವಿದೆ. ತಾಯಿಯನ್ನು ನಿಮ್ಮ ತಾಯಿಯ ಹಾಗೆ ಕರುಣೆ ತೋರಿರಿ’ ಎಂದು ಎಚ್ಚರಿಸಿದ್ದಾರೆ. ನಮಗೆ ಜನ್ಮ ನೀಡಿದ ಮಹಿಳೆ ತಾಯಿ.
ಇನ್ನು ನಮ್ಮೊಂದಿಗೆ ಜನಿಸಿದ ಅಕ್ಕ-ತಂಗಿಯರೊಂದಿಗೆ ನಮ್ಮ ನಡವಳಿಕೆ ಸಮಾನ ದೃಷ್ಟಿ, ಗೌರವಾದರಗಳಿಂದ ಕೂಡಿರಬೇಕೆಂಬ ಉಪದೇಶವನ್ನೇ ನೀಡಲಾಗಿದೆ. ಆಸ್ತಿಯಲ್ಲಿ ತನ್ನ ಸೋದರಿಯರಿಗೆ ನಿರ್ದಿಷ್ಟ ಪಾಲನ್ನು ಕೊಡಬೇಕೆಂಬ ನ್ಯಾಯವನ್ನು ಎತ್ತಿ ಹಿಡಿಯಲಾಗಿದೆ. ಇನ್ನು ನಮಗಾಗಿ ಜನಿಸಿದ ಇನ್ನೊಬ್ಬ ಮಹಿಳೆಯಾದ ಪತ್ನಿಯನ್ನು ಗೌರವದಿಂದ ಕಾಣಬೇಕೆಂದೂ, ಆಕೆ ಪತಿಯ ಉಡುಪು, ಪತಿ ಆಕೆಯ ಉಡುಪು' ಎಂದು ಸಾರುತ್ತ, ವಿವಾಹದ ಸಂದರ್ಭದಲ್ಲಿ ಮಹಿಳೆ ತನ್ನ ಪತಿಯ ಕಡೆಯಿಂದ ಉಡುಗೊರೆ ಪಡೆಯಲು ಹಕ್ಕುದಾರಳಾಗುತ್ತಾಳೆ ಎಂದು ಕುರಾನಿನ ಅನೇಕ ವಚನಗಳಲ್ಲಿ ಹೇಳಲಾಗಿದೆ. ಇನ್ನು ನಮ್ಮಿಂದ ಜನಿಸಿದ ಮಹಿಳೆ ಮಗಳು. ಆಕೆಯನ್ನಂತೂ,ಮಗಳು ಸ್ವರ್ಗದ ಬಾಗಿಲು’ ಎಂದೇ ಪ್ರವಾದಿವರ್ಯರು ಕರೆದಿದ್ದಾರೆ.
ಹೀಗೆ ಮಹಿಳೆಯೊಬ್ಬಳು ತಾಯಿ, ಸೋದರಿ, ಪತ್ನಿ ಹಾಗೂ ಮಗಳಾಗಿ ಮನೆಯನ್ನು ಬೆಳಕಿನ ಸಾಧನವನ್ನಾಗಿ ಮಾಡುತ್ತಾಳೆ ಎಂಬ ಮಾತನ್ನು ಎಲ್ಲ ಧಾರ್ಮಿಕರೂ ಒಪ್ಪುತ್ತಾರೆ. ಈ ಸಮಾನತೆ ಇರುವ ಸಮಾಜ ಸ್ವರ್ಗಸಮಾನವಾಗುವುದರಲ್ಲಿ ಸಂದೇಹವಿಲ್ಲ.