ಜ್ಞಾನ ಸಂಪಾದನೆಗೆ ಇಂದ್ರಿಯಗಳಿಗೆ ಲಗಾಮು ಅಗತ್ಯ

“ಇಂದ್ರಿಯ” ಎಂಬುದು ನಮ್ಮ ದೇಹದ ಅವಯವಗಳಲ್ಲಿ ಪ್ರಮುಖ ಅಂಗ. ಭಾರತೀಯ ತತ್ತ್ವಶಾಸ್ತ್ರದಲ್ಲಿ ನಮ್ಮ ಇಂದ್ರಿಯಗಳನ್ನು “ಜ್ಞಾನೇಂದ್ರಿಯ” ಮತ್ತು “ಕರ್ಮೇಂದ್ರಿಯ” ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಜ್ಞಾನೇಂದ್ರಿಯಗಳು ಜ್ಞಾನ ಪಡೆಯಲು ಸಹಾಯ ಮಾಡುವತ್ತವೆ: ಚಕ್ಷು (ಕಣ್ಣು), ನೋಡುವ ಶಕ್ತಿ, ಶ್ರವಣ(ಕಿವಿ), ಕೇಳುವ ಶಕ್ತಿ, ಘ್ರಾಣ(ಮೂಗು), ವಾಸನೆ ಗುರುತಿಸುವ ಶಕ್ತಿ, ರಸನ(ನಾಲಿಗೆ), ರುಚಿಯನ್ನು ಅನುಭವಿಸುವ ಶಕ್ತಿ, ಸ್ಪರ್ಶ(ತ್ವಚೆ), ಸ್ಪರ್ಶದ ಅರಿವು. ಜ್ಞಾನೇಂದ್ರಿಯಗಳು ಮೂಲಕ ನಾವು ಭೌತಿಕ ಜಗತ್ತಿನ ಅರಿವು ಪಡೆಯುತ್ತೇವೆ. ಉದಾಹರಣೆಗೆ, ಕಣ್ಣುಗಳಿಂದ ನೋಡುವುದು, ಕಿವಿಗಳಿಂದ ಕೇಳುವುದು ಇತ್ಯಾದಿ. ಅದೇ ರೀತಿ ಕರ್ಮೇಂದ್ರಿಯಗಳು ಕ್ರಿಯಾತ್ಮಕ ಕೆಲಸಗಳನ್ನು ನಿರ್ವಹಿಸುವ ಐದು ಅಂಗಗಳು: ವಾಕ್(ಬಾಯಿ), ಮಾತನಾಡಲು. ಪಾಣಿ(ಕೈ), ಹಿಡಿಯಲು, ಕೆಲಸ ಮಾಡಲು. ಪಾದ, ನಡೆದು ಹೋಗಲು. ಪಾಯು(ಗುದನಾಳ), ಮಲವಿಸರ್ಜನೆಗೆ. ಉಪಸ್ಥ(ಪ್ರಜನನ ಅಂಗಗಳು), ಸಂತಾನೋತ್ಪತ್ತಿಗೆ.
ನಾವು ನಿತ್ಯದಲ್ಲಿ ಮಾಡುವ ಯಾವುದೇ ಕೆಲಸಗಳಲ್ಲಿ, ಈ ಜ್ಞಾನೇಂದ್ರಿಯಗಳು ಹಾಗು ಕರ್ಮೇಂದ್ರಿಯಗಳು ಕಾರ್ಯಪ್ರವೃತ್ತರಾಗುತ್ತವೆ. ಜ್ಞಾನೇಂದ್ರಿಯಗಳು ಭೌತಿಕ ಜಗತ್ತಿನ ಅರಿವು ಒದಗಿಸುತ್ತವೆ. ಕರ್ಮೇಂದ್ರಿಯಗಳು ಆ ಜ್ಞಾನವನ್ನು ಆಧರಿಸಿ ಕ್ರಿಯೆ ಮಾಡಲು ಸಹಾಯ ಮಾಡುತ್ತವೆ. ಆದರೆ, ಅನಿಯಂತ್ರಿತ ಕರ್ಮೇಂದ್ರಿಯಗಳ ಕೆಲಸಗಳು ನಮ್ಮಲ್ಲಿ ದುಷ್ಪರಿಣಾಮ ತರುವ ಸಾಧ್ಯತೆಯೂ ಇದೆ. ಆದ್ದರಿಂದ, ಇವುಗಳನ್ನು ನಿಯಂತ್ರಿಸಿ ಸರಿಯಾದ ದಾರಿಯಲ್ಲಿ ಬಳಸಿದರೆ ಜೀವನ ಸಾರ್ಥಕವಾಗುತ್ತದೆ. ಇಂದ್ರಿಯಗಳ ಅತಿಯಾದ ಪ್ರಭಾವಕ್ಕೆ ನಾವು ಒಳಗಾದರೆ ನಮ್ಮ ಜೀವನ ಅಸ್ಥಿರವಾಗಬಹುದು. ಆದ್ದರಿಂದ, ಇಂದ್ರಿಯ ನಿಗ್ರಹ ಬಹಳ ಮುಖ್ಯ ಅದರಲ್ಲೂ ಜ್ಞಾನ ಸಂಪಾದನೆ, ಸಾಧನೆ ಮಾಡುವವರಿಗೆ ಇಂದ್ರಿಯದ ಹತೋಟಿಯಲ್ಲಿ ಇರಲೇ ಬೇಕು ಎಂದು ನಮ್ಮ ಹಿಂದಿನ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ತಿಳಿಸಿದ್ದಾರೆ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾನೆ :
“ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ|
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ||”(ಭ.ಗೀ. ೨.೬೦)
ನಮ್ಮ ಸಂಸ್ಕೃತಿಯಲ್ಲಿ ಸಾಧನೆ ಮತ್ತು ಆತ್ಮಜ್ಞಾನವನ್ನು ಪಡೆಯಲು ಇಂದ್ರಿಯಗಳ ನಿಯಂತ್ರಣ ಅವಶ್ಯಕ. ಉಪನಿಷತ್ತುಗಳು ಮತ್ತು ವೇದಗಳು ಇಂದ್ರಿಯ ನಿಗ್ರಹವನ್ನು ಮೋಕ್ಷ ಮಾರ್ಗದ ಪ್ರಮುಖ ಹಂತವೆಂದು ತಿಳಿಸುತ್ತವೆ. ಅತೀ ಬುದ್ಧಿವಂತನಾದವನಿಗೂ, ಇಂದ್ರಿಯಗಳು ಬಲವಂತವಾಗಿ ಮನಸ್ಸನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತವೆ. ಆದ್ದರಿಂದ ನಮ್ಮ ಜ್ಞಾನೇಂದ್ರಿಯಗಳ ಹಾಗು ಕರ್ಮೇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧಕರು ಯೋಗ, ಧ್ಯಾನ, ಧಾರ್ಮಿಕ ಆಚರಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
“ಯದುದ್ಯತಾ ಮಾನಸೋ ಮಹಾನಾತ್ಮಾ ನೈವ ದೇಹೇ ಪತತಿ”
ಯಾರು ಇಂದ್ರಿಯಗಳನ್ನು ಹಿಡಿತದಲ್ಲಿ ಇಡುತ್ತಾರೋ, ಅವರ ಆತ್ಮ ಶ್ರೇಷ್ಠವಾಗುತ್ತದೆ, ಮತ್ತು ಅವರು ಪಾಪ ಕಾರ್ಯಗಳನ್ನು ಮಾಡುವುದೇ ಇಲ್ಲ ಅಥವಾ ಅತ್ಯಂತ ಕಡಿಮೆ ಪಾಪ ಕಾರ್ಯಗಳನ್ನು ಮಾಡುತ್ತಾರೆ. ಅಂದರೆ ಭೌತಿಕ ಆಕರ್ಷಣೆ ಕಡಿಮೆ ಮಾಡಿದಾಗ, ಆತ್ಮಜ್ಞಾನ ಮತ್ತು ಪರಮಾತ್ಮದ ಕಡೆ ಗಮನ ಹರಿಸಲು ಸಾಧ್ಯ.