ಕಾರವಾರ: ಅಂಕೋಲಾದ ಕೇಣಿಯಲ್ಲಿ ಗ್ರೀನ್‌ಫೀಲ್ಡ್ ಬಂದರು ವಿರೋಧಿಸಿ ಸ್ಥಳೀಯ ಮೀನುಗಾರರ ಪ್ರತಿಭಟನೆ ಮತ್ತೆ ಜೋರಾಗಿದೆ. ಉದ್ದೇಶಿತ ಈ ವಾಣಿಜ್ಯ ಬಂದರನ್ನು ಕೈ ಬಿಡುವಂತೆ ಒತ್ತಾಯಿಸಿ ಮಂಗಳವಾರ ಅಂಕೋಲಾದ ಬೇಲೆಕೇರಿ ಕಡಲತೀರದಲ್ಲಿ ನೂರಾರು ಮೀನುಗಾರರು ಮಾನವ ಸರಪಳಿ ನಿರ್ಮಿಸಿ ಹಾಗೂ ಬೋಟ್‌ಗಳ ಮೂಲಕ ಸಮುದ್ರಕ್ಕೆ ತೆರಳಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕೇಣಿ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿರುವ ಕಾರಣ ತಾಲೂಕಿನ ಬೇಲೆಕೇರಿ ಕಡಲತೀರದಲ್ಲಿ ಮೀನುಗಾರಿಕೆ ಹಾಗೂ ಮೀನು ಮಾರಾಟ ಸ್ಥಗಿತಗೊಳಿಸಿ ಒಂದೆಡೆ ಸೇರಿದ ಮೀನುಗಾರರು ಕಡಲತೀರದುದ್ದಕ್ಕೂ ಸುಮಾರು ೧ ಕಿ.ಮೀ ಮಾನವ ಸರಪಳಿ ನಿರ್ಮಾಣ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. “ಗೋ ಬ್ಯಾಕ್ ಜೆಎಸ್‌ಡಬ್ಲೂ” ಘೋಷಣೆ ಕೂಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ನೂರಾರು ಮೀನುಗಾರರು, ಸಾಂಪ್ರದಾಯಿಕ ಪಾತಿ ದೋಣಿ, ಯಾಂತ್ರಿಕ ಬೋಟುಗಳ ಮೂಲಕ ಸಮುದ್ರದಲ್ಲಿ ತೆರಳಿ ವಿನೂತನವಾಗಿ ಬಂದರು ಸರ್ವೆ ಕಾರ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಖಾಸಗಿ ಬಂದರು ಅಗತ್ಯವಿಲ್ಲ, ಬಂದರು ನಿರ್ಮಾಣ ಕೈಬಿಡಬೇಕು, ಇಲ್ಲವೇ ಸ್ಥಳಾಂತರ ಮಾಡುವಂತೆ ಆಗ್ರಹಿಸಿದರು.
ಸೀಬರ್ಡ್ ಯೋಜನೆಗೆ ಈಗಾಗಲೇ ನಮ್ಮ ಮನೆ ಜಮೀನುಗಳನ್ನು ಕಳೆದುಕ್ಕೊಂಡು ಇಲ್ಲಿ ವಾಸವಾಗಿದ್ದೇವೆ. ಕಾರವಾರ ಅಂಕೋಲಾದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ೧೭ ಕಡಲತೀರಗಳು ಈ ಯೋಜನೆ ಪಾಲಾಗಿವೆೆ. ಇದೀಗ ಅಳಿದುಳಿದ ಕಡಲತೀರಗಳಲ್ಲಿ ಮೀನುಗಾರಿಕೆ ಮೂಲಕ ಬದುಕು ಕಟ್ಟಿಕ್ಕೊಂಡಿದ್ದೇವೆ. ಆದರೆ ಇದೀಗ ಮತ್ತೆ ಈ ಬೃಹತ್ ಬಂದರು ನಿರ್ಮಾಣದಿಂದ ನಾವು ನಿರಾಶ್ರಿತರಾಗುತ್ತೇವೆ. ಅಲ್ಲದೆ ಈ ಪ್ರದೇಶ ಮೀನುಗಾರಿಕೆಗೆ ಯೋಗ್ಯವಾಗಿದ್ದು ಇಲ್ಲಿ ಬಂದರು ನಿರ್ಮಾಣವಾದಲ್ಲಿ ಮೀನುಗಾರಿಕೆಗೆ ದೊಡ್ಡ ಪೆಟ್ಟು ಬೀಳಲಿದೆ. ಇದರಿಂದ ಮೀನುಗಾರಿಕೆಯನ್ನೆ ನಂಬಿಕೊಂಡವರು ಸಂಕಷ್ಟಕ್ಕೆ ಸಿಲುಕುವ ಕಾರಣ ಈ ಯೋಜನೆಯಲ್ಲಿ ಇಲ್ಲಿ ಕೈ ಬಿಡಬೇಕು. ಇಲ್ಲವಾದಲ್ಲಿ ಯೋಜನೆ ವಿರುದ್ಧ ರಾಜ್ಯದಾದ್ಯಂತ ಹೋರಾಟ ಮುಂದುವರಿಸಲಾಗುವುದು ಎಂದು ಮೀನುಗಾರ ಮುಖಂಡ ಶ್ರೀಕಾಂತ ದುರ್ಗೇಕರ್ ಎಚ್ಚರಿಸಿದರು.
೪೧೧೯ ಕೋಟಿ ವೆಚ್ಚದ ಈ ಯೋಜನೆಯನ್ನು ಜೆಎಸ್‌ಡಬ್ಲೂ ಕಂಪೆನಿ ಗುತ್ತಿಗೆ ಪಡೆದು ಕಳೆದ ಕೆಲ ದಿನಗಳಿಂದ ಸಮುದ್ರ ಭಾಗದಲ್ಲಿ ಸರ್ವೇ ಕಾರ್ಯ ನಡೆಸುತ್ತಿದೆ. ಇದಕ್ಕೆ ಮೀನುಗಾರರು ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದು ಜಿಲ್ಲಾಡಳಿತ ನಿಷೇಧಾಜ್ಞೆ ನಿರಂತರವಾಗಿ ಜಾರಿ ಮಾಡಿ ಸರ್ವೇ ಕಾರ್ಯಕ್ಕೆ ಅವಕಾಶ ಕಲ್ಪಿಸಿದೆ. ಇದೇ ಕಾರಣಕ್ಕೆ ಸ್ಥಳ ಬದಲಾವಣೆ ಮಾಡಿ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಮೀನುಗಾರರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಡಲತೀರದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಸಮುದ್ರದಲ್ಲಿ ಕರಾವಳಿ ಕಾವಲುಪಡೆ ಸಿಬ್ಬಂದಿ ಭದ್ರತೆ ಕಲ್ಪಿಸಿದ್ದರು.