ಸ್ಮಾರ್ಟ್ ಮೀಟರ್ ಸುತ್ತ ಅನುಮಾನದ ಹುತ್ತ

0
22

ಕೊನೆಗೂ ರಾಜ್ಯ ಸರ್ಕಾರ ಸ್ಮಾರ್ಟ್ ಮೀಟರ್ ಅಳವಡಿಸಲು ನಿರ್ಧರಿಸಿದೆ. ಹೊಸದಾಗಿ ಮೀಟರ್ ಅಳವಡಿಸಿಕೊಳ್ಳುವವರಿಗೆ ಇದನ್ನೇ ನೀಡಲು ಯೋಜಿಸಲಾಗಿದೆ. ಅದರೂ ಗ್ರಾಹಕರಲ್ಲಿ ಹಲವು ಅನುಮಾನಗಳು ಮೂಡಿವೆ. ಇವುಗಳನ್ನು ಬಗೆಹರಿಸುವ ಪ್ರಯತ್ನ ಇನ್ನೂ ನಡೆದಿಲ್ಲ. ಈಗ ಗ್ರಾಹಕರು ಬಳಸುತ್ತಿರುವುದು ಸಾಮಾನ್ಯ ಮೀಟರ್. ಇದರ ಬೆಲೆ ೧ ಸಾವಿರ ರೂ. ಕೆಲವು ಕಡೆ ಎಸ್ಕಾಂಗಳೇ ಮೀಟರ್ ಅಳವಡಿಸಿವೆ. ಮತ್ತೆ ಕೆಲವು ಕಡೆ ಗ್ರಾಹಕರು ಖರೀದಿ ಮಾಡಿ ನೀಡುತ್ತಿದ್ದಾರೆ. ಎಸ್ಕಾಂ ಕಂಪನಿಯ ಸಿಬ್ಬಂದಿಯೇ ಅಳವಡಿಸಬೇಕು. ಆಮೇಲೆ ಇದು ಎಸ್ಕಾಂ ಆಸ್ತಿ. ಇದಕ್ಕೆ ಪ್ರತಿತಿಂಗಳು ಬಾಡಿಗೆಯನ್ನೂ ಎಸ್ಕಾಂ ಪಡೆಯುತ್ತಿದೆ. ಒಂದು ವೇಳೆ ಕೆಟ್ಟರೆ ಗ್ರಾಹಕ ಅದನ್ನು ಸರಿಪಡಿಸಬೇಕು. ಕೆಟ್ಟಿದೆ ಎಂದು ಸುಮ್ಮನೆ ಇರುವ ಹಾಗಿಲ್ಲ. ೬ ತಿಂಗಳ ಹಳೆಯ ದರವನ್ನು ಪಾವತಿ ಮಾಡಬೇಕಾಗುತ್ತದೆ. ಇದರೊಂದಿಗೆ ಮೂರು ತಿಂಗಳ ಮುಂಗಡ ಠೇವಣಿ ನೀಡಬೇಕಿತ್ತು. ಗ್ರಾಹಕರ ಹೋರಾಟದ ಫಲ ಇದು ೨ ತಿಂಗಳಿಗೆ ಇಳಿಯಿತು. ಈಗ ಇದಕ್ಕೆ ಪ್ರತಿ ವರ್ಷ ಏಪ್ರಿಲ್‌ನಲ್ಲಿ ಬಡ್ಡಿಯನ್ನು ಎಲ್ಲ ಎಸ್ಕಾಂಗಳು ಗ್ರಾಹಕರಿಗೆ ನೀಡುತ್ತಿದೆ. ಕೆಇಆರ್‌ಸಿ ಹೇಳಿದ ರೀತಿ ಬಡ್ಡಿ ಪಾವತಿಯಾಗುತ್ತಿಲ್ಲ. ರೆಪೊ ದರವನ್ನು ಪರಿಗಣಿಸಲಾಗಿದೆ. ಇದು ರಿಸರ್ವ್ ಬ್ಯಾಂಕ್ ಇತರ ಬ್ಯಾಂಕ್‌ಗಳಿಗೆ ವಿಧಿಸಲು ಬಡ್ಡಿದರ. ಆದರೆ ಜನಸಾಮಾನ್ಯರು ಸಾಲ ತೆಗೆದುಕೊಂಡಲ್ಲಿ ವಿಧಿಸುವ ಬಡ್ಡಿದರವನ್ನು ಎಸ್ಕಾಂಗಳು ನೀಡುತ್ತಿಲ್ಲ. ಇದರ ಬಗ್ಗೆ ಪ್ರತಿ ವರ್ಷ ಕೆಇಆರ್‌ಸಿ ಮುಂದೆ ಗ್ರಾಹಕರು ತಮ್ಮ ಅಹವಾಲು ಮಂಡಿಸುತ್ತ ಬಂದಿದ್ದಾರೆ. ಈಗ ಏಪ್ರಿಲ್‌ನಲ್ಲಿ ಹೊಸ ವಿದ್ಯುತ್ ದರ ಜಾರಿಗೆ ಬರಲಿದೆ. ಆಗ ಹೊಸ ಬಡ್ಡಿದರ ಘೋಷಣೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.
೨೦೨೧ ರಲ್ಲೇ ಕೇಂದ್ರ ಸರ್ಕಾರ ಸ್ಮಾರ್ಟ್ ಮೀಟರ್ ಬಳಕೆಗೆ ಹೊಸ ಯೋಜನೆ ಘೋಷಿಸಿತು. ಅದು ೨೦೨೫ಕ್ಕೆ ಮುಕ್ತಾಯಗೊಳ್ಳಲಿದೆ. ರಾಜ್ಯ ಸರ್ಕಾರ ಈ ಯೋಜನೆಯನ್ನು ಬಳಸಿಕೊಂಡಿಲ್ಲ. ಅದಕ್ಕೆ ಕೆಲವು ಕಾರಣಗಳಿವೆ. ಕೇಂದ್ರದ ನೆರವು ಬೇಕು ಎಂದರೆ ಕೆಲವು ಆರ್ಥಿಕ ಶಿಸ್ತು ಅನುಸರಿಸಬೇಕು. ಯಾವುದೇ ಬಾಕಿ ಇರಕೂಡದು. ಹೊಸ ಮೀಟರ್ ಅಳವಡಿಕೆಗೆ ಗ್ರಾಹಕರಿಂದ ೨ ತಿಂಗಳ ಠೇವಣಿ ಪಡೆಯುವ ಹಾಗಿಲ್ಲ. ಗ್ರಾಹಕರು ಕೇಳಿದರೆ ಹೊಸ ಮೀಟರ್ ಕೊಡಬೇಕು. ಮೀಟರ್ ಇಲ್ಲ ಎಂದರೆ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ನೀಡಬೇಕು. ಸ್ಮಾರ್ಟ್ ಮೀಟರ್ ನಿಗದಿತ ದರದಲ್ಲಿ ಸಿಗುವಂತೆ ನೋಡಿಕೊಳ್ಳಬೇಕು. ಹಳೆ ಮೀಟರ್ ಗ್ರಾಹಕ ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹಳೆ ಮೀಟರ್ ಗುಜರಿಗೆ ಹಾಕುವಂತಿಲ್ಲ. ಅದನ್ನು ವಿಲೇವಾರಿ ಮಾಡುವುದಕ್ಕೂ ಕೆಲವು ನಿಯಮಗಳಿವೆ. ಸ್ಮಾರ್ಟ್ ಮೀಟರ್‌ಗೆ ಕರೆನ್ಸಿ ಸಿಗುವಂತೆ ನೋಡಿಕೊಳ್ಳಬೇಕು. ಕೆಇಆರ್‌ಸಿ ಅದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ರೂಪಿಸಿದೆ. ಏನೇ ಆದರೂ ಕೇಂದ್ರಿಯ ವಿದ್ಯುತ್ ಪ್ರಾಧಿಕಾರದ ನಿಯಮಗಳನ್ನು ಪಾಲಿಸಲೇಬೇಕು. ಈಗ ಸದ್ಯಕ್ಕೆ ಬೆಂಗಳೂರು ನಗರದಲ್ಲಿ ಸ್ಮಾರ್ಟ್ ಮೀಟರ್ ಜಾರಿಗೆ ಬರಲಿದೆ. ಅದನ್ನು ಹೊಸ ಮನೆಗೆ ಮಾತ್ರ ಅಳವಡಿಸಲಾಗುವುದು. ಈಗ ಸರ್ಕಾರ ಗೃಹಜ್ಯೋತಿ ಯೋಜನೆಯಲ್ಲಿ ಮಾಸಿಕ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡುತ್ತಿದೆ. ಅದು ಹೊಸಬರಿಗೆ ಅನ್ವಯವಾಗುವುದಿಲ್ಲ.
ಸ್ಮಾರ್ಟ್ ಮೀಟರ್ ಮೊಬೈಲ್ ತಂತ್ರಜ್ಞಾನ ಮತ್ತು ಹಳೆಯ ಪೇಜರ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಹೀಗಾಗಿ ಗ್ರಾಹಕ ನೇರವಾಗಿ ಕರೆನ್ಸಿ ಖರೀದಿಸಿ ಮನೆಯಲ್ಲಿರುವ ಮೀಟರ್ ಮುಂದೆ ಕಾಣಿಸುವ ಪುಟ್ಟ ಕೀ ಬೋರ್ಡ್‌ಗೆ ಫೀಡ್ ಮಾಡಬೇಕು. ಮೊದಲು ನಿಗದಿತ ಶುಲ್ಕ ಮತ್ತು ವಿದ್ಯುತ್ ತೆರಿಗೆ ಕಡಿತಗೊಳ್ಳುತ್ತದೆ. ಆಮೇಲೆ ವಿದ್ಯುತ್ ಬಳಸಿದಂತೆ ಕರೆನ್ಸಿ ಕಡಿಮೆಯಾಗುತ್ತ ಹೋಗುತ್ತದೆ. ಕೊನೆ ೫೦ ಯೂನಿಟ್ ಇರುವಾಗ ಮತ್ತೆ ಕರೆನ್ಸಿ ಹಾಕಬೇಕು. ಗ್ರಾಹಕ ಬಳಸಿದಂತೆ ಅದರ ಸಂಕೇತ ವಿದ್ಯುತ್ ಕಂಪನಿಗೆ ನಿರಂತರ ಹೋಗುತ್ತಿರುತ್ತದೆ. ಒಂದು ವೇಳೆ ಕರೆನ್ಸಿ ತುಂಬಲಿಲ್ಲ ಎಂದರೆ ಕಂಪನಿ ಅಲ್ಲಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಬಹುದು. ಇದನ್ನು ಅಳವಡಿಸಿದರೆ ವಿದ್ಯುತ್ ನಷ್ಟ ಶೇ.೧೨-೧೫ಕ್ಕೆ ಇಳಿಯುತ್ತದೆ ಎಂಬುದು ಕೇಂದ್ರದ ವಾದ. ಇದಕ್ಕೆ ಎಲ್ಲ ಕಡೆ ಸ್ಮಾರ್ಟ್ ಮೀಟರ್ ಅಳವಡಿಕೆ ಆಗಬೇಕು. ಇದು ಹಂತಹಂತವಾಗಿ ನಡೆಯಬೇಕು. ಗ್ರಾಮೀಣ ಪ್ರದೇಶಕ್ಕೆ ಇದನ್ನು ಅಳವಡಿಸುವುದಕ್ಕೆ ಇನ್ನೂ ಸಾಕಷ್ಟು ಸಮಯ ಬೇಕು. ಇದಕ್ಕೆ ಒಂದೇ ವಿದ್ಯುತ್ ದರ ಇರಬೇಕು. ನಿಗದಿತ ಶುಲ್ಕ, ವಿದ್ಯುತ್ ತೆರಿಗೆ, ವಿದ್ಯುತ್ ದರ ಮಾತ್ರ ಇರಬೇಕು. ಹಿಂದೆ ಇದ್ದಂತೆ ವಿವಿಧ ಹಂತದ ದರ ನಿಗದಿಪಡಿಸಲು ಬರುವುದಿಲ್ಲ.
ರಾಜ್ಯ ಸರ್ಕಾರ ತನ್ನ ಕಚೇರಿಗಳಿಗೆ ಇದನ್ನು ಮೊದಲು ಅಳವಡಿಸಿ ನೋಡಬೇಕಿತ್ತು. ಅದನ್ನು ಬಿಟ್ಟು ಏಕದಂ ಗ್ರಾಹಕರ ಮೇಲೆ ಹೇರಲು ಹೊರಟಿದೆ. ಸೋಲಾರ್ ವಿದ್ಯುತ್ ಹಾಗೂ ಸ್ಮಾರ್ಟ್ ಮೀಟರ್ ಬಂದಲ್ಲಿ ವಿದ್ಯುತ್ ನಷ್ಟ ಮತ್ತು ವಿದ್ಯುತ್ ಕಳವು ಎರಡು ಕಡಿಮೆಯಾಗಲಿದೆ. ಇವೆರಡನ್ನೂ ಸರ್ಕಾರ ತನ್ನ ಕಟ್ಟಡಗಳಿಗೆ ಅನ್ವಯಿಸಬೇಕು. ತಮಿಳುನಾಡಿನಲ್ಲಿ ಮಳೆ ನೀರು ಸಂಗ್ರಹ ಮತ್ತು ಸೋಲಾರ್ ಅಳವಡಿಕೆಯಲ್ಲಿ ಮುಂದಿದೆ. ಕೇಂದ್ರ ಸರ್ಕಾರ ತನ್ನ ಕಟ್ಟಡಗಳಲ್ಲಿ ಇದನ್ನು ಕೈಗೊಂಡಿದೆ. ರಾಜ್ಯ ಸರ್ಕಾರ ಮಾತ್ರ ಇನ್ನು ಮೀನಮೇಷ ಎಣಿಸುತ್ತಿದೆ. ರೈಲ್ವೆ ಇಲಾಖೆ ಈಗಾಗಲೇ ಎಲ್ಲ ಪ್ಲಾಟ್‌ಫಾರಂಗಳ ಮೇಲೆ ಸೋಲಾರ್ ಅಳವಡಿಸುತ್ತಿವೆ.

Previous articleಓದಿನ ದೋಣಿಗೆ ಕೌಶಲ್ಯವೇ ಅಂಬಿಗ
Next articleವಡಾ ಪಾವ್ ಭಾಜಿ ಮೇಲೆ ಮಾಲಿನ್ಯದ ಕರಿನೆರಳಿನ ಬರೆ