ಎಕರೆಗೆ ೨೫ ಸಾವಿರ ಪರಿಹಾರಕ್ಕೆ ಆಗ್ರಹ

0
12

ಡಿಸಿಎಂ ಡಿಕೆಶಿಗೆ ರೈತರ ನಿಯೋಗ ಭೇಟಿ: ಸಕಾರಾತ್ಮಕ ಸ್ಪಂದನೆ

ಕಲಬುರಗಿ: ೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಹಾನಿಯಾಗಿರುವ ತೊಗರಿ ಬೆಳೆಗೆ ಪರಿಹಾರ ಮತ್ತು ರೈತರ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಜಿಲ್ಲಾ ರೈತ ಮುಖಂಡರು ಭೇಟಿ ಮಾಡಿ ಮನವಿ ಸಲ್ಲಿಸಿದರು.
ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಶನಿವಾರ ರೈತ ಮುಖಂಡ ಅವ್ವಣ್ಣಾ ಮ್ಯಾಕೇರಿ ನೇತೃತ್ವದಲ್ಲಿ ಹಲವು ರೈತ ಮುಖಂಡರು ಭೇಟಿ ಮಾಡಿ, ೨೦೨೪-೨೫ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಮುಂಗಾರು ಬೆಳೆಗಳಾದ ತೊಗರಿ, ಹೆಸರು,ಉದ್ದು,ಸೋಯಾ ಬೆಳೆಗಳು ಸಂಪೂರ್ಣ ಹಾಳಾಗಿದ್ದು,೧೯,೮೬೫ ಹೆಕ್ಟೇರ್ ಪ್ರದೇಶದಲ್ಲಿ ಹಾನಿಗೀಡಾಗಿದೆ. ಕೃಷಿ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.ಆದರೆ,೫೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆಗಳು ವಾಸ್ತವವಾಗಿ ಬೆಳೆ ಹಾನಿಯಾಗಿದೆ ಎಂದು ಮುಖಂಡ ಅವ್ವಣ್ಣಾ ಮ್ಯಾಕೇರಿ ಮನವರಿಕೆ ಮಾಡಿದರು.

ಪ್ರಸಕ್ತ ಹಂಗಾಮಿನಲ್ಲಿ ೬.೬ ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಯಾಗಿದ್ದು, ಇದರಲ್ಲಿ ೧.೮೨ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ನೆಟೆ ರೋಗದಿಂದ,ಕಳಪೆ ಬೀಜ ಮತ್ತು ತೇವಾಂಶದ ಕೊರತೆಯಿಂದ ಹಾನಿಯಾಗಿದೆ ಎಂದು ಕೃಷಿ ಇಲಾಖೆ ರಾಜ್ಯ ಸರ್ಕಾರಕ್ಕೆ ವರದಿ ಮಾಡಿದೆ. ಆದರೆ ವಾಸ್ತವದಲ್ಲಿ ೪ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಹಾನಿಯಾಗಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಕೂಡಲೇ ರೈತರ ಹಿತದೃಷ್ಟಿಯಿಂದ ೨೦೨೪-೨೫ನೇ ಸಾಲಿನ ತೊಗರಿ ಬೆಳೆ ಪರಿಹಾರಕ್ಕಾಗಿ ಕನಿಷ್ಠ ೮೦೦ ಕೋಟಿ ರೂಪಾಯಿ ಪರಿಹಾರ, ಬೆಳೆ ವಿಮೆ ಸಂಪೂರ್ಣ ಸರ್ಕಾರವೇ ಮಾಡಿಸಬೇಕು. ಪಹಣಿಯಲ್ಲಿ ಜಿಐ ಟ್ಯಾಗ ಇದ್ದವರಿಗೆ ಮಾನ್ಯತೆ ನೀಡಬೇಕು. ೧೦ ಸಾವಿರ ಬೆಂಬಲ ಬೆಲೆ, ಮುಂದಿನ ವರ್ಷ ನೆಟೆ ರೋಗ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳುವಂತೆ ರೈತ ಮುಖಂಡರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಬೇಡಿಕೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ದಯಾನಂದ ಪಾಟೀಲ್, ಬಸವರಾಜ ಇಂಗಿನ್, ಚಂದ್ರಶೇಖರ ಹಿರೇಮಠ, ಶಿವಾನಂದ ಮಠಪತಿ, ಸಿದ್ರಾಮಪ್ಪ ದಂಗಾಪುರ, ಸುರೇಶ್ ಸಜ್ಜನ,ಮಲ್ಲಣ್ಣ ಕುಲಕರ್ಣಿ, ರೇವಣಸಿದ್ದ ಸಂಕಾಣಿ, ಮಹೇಶ್ ಪಾಟೀಲ್,ಕುಶಾಲ್ ದೇವ ಪಾಟೀಲ್, ಈರಣ್ಣಗೌಡ ಪಾಟೀಲ್ ಸೇರಿದಂತೆ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.

Previous articleಮಹಿಳಾ ದಿನಾಚರಣೆಗೆ ವಿಶೇಷವಾಗಿ ಬಂದ ಸೋನಾಕ್ಷಿಯ ಜಟಾಧಾರ
Next articleಮಠದ ಮ್ಯೂಜಿಯಂಗೆ ಬಂದ ಡಾ.ಮಹಾಂತಶ್ರೀಗಳ ಮೇಣದ ಪ್ರತಿಮೆಗಳು