ಕುಳಗೇರಿ ಕ್ರಾಸ್(ಬಾಗಲಕೋಟೆ): ಚಿರ್ಲಕೊಪ್ಪ ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ನಾಲ್ಕೈದು ದಿನಗಳಿಂದ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ದು, ಸುಮಾರು 92 ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿದೆ.
ಕೆಲವು ವಿದ್ಯಾರ್ಥಿಗಳು ವಿದ್ಯಾಲಯದಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನು ಕೆಲವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾರೆ. ಇನ್ನಷ್ಟು ವಿದ್ಯಾರ್ಥಿಗಳು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಪಾಲಕರ ಜೊತೆ ಮನೆಗೆ ತೆರಳಿದ್ದಾರೆ.
ವಿದ್ಯಾರ್ಥಿಗಳಿಗೆ ವ್ಯಾಪಕ ಅನಾರೋಗ್ಯ ಕಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ದಿಢೀರ್ ವಿದ್ಯಾಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ಎಲ್ಲ ಕೊಠಡಿಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗದಂತೆ ಆರೋಗ್ಯ ತಪಾಸಣೆ ಮಾಡಿ ಎಂದು ವೈದ್ಯರಿಗೆ ಹೇಳಿದರು. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸಮಸ್ಯೆಗಳಾದರೆ ತಕ್ಷಣ ಚಿಕಿತ್ಸೆ ಕೊಡಿಸಬೇಕು ಎಂದು ವಿದ್ಯಾಲಯದ ಸಿಬ್ಬಂದಿಗೆ ಸೂಚಿಸಿದ ಅವರು, ಸ್ವಚ್ಛತೆ ಪಾಠ ಮಾಡಿದರು. ನಂತರ ಮಕ್ಕಳ ಆರೋಗ್ಯ ವಿಚಾರಿಸಿದ ಅವರು ಭಯ ಪಡಬೇಡಿ ಎಂದು ಮಕ್ಕಳಿಗೆ ಧೈರ್ಯ ತುಂಬಿದರು.