ಮಂಗಳೂರು: ಆಟೋ ರಿಕ್ಷಾದಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎನ್ನು ಸಾಗಾಟ/ಮಾರಾಟ ಮಾಡುತ್ತಿದ್ದ ರಿಕ್ಷಾ ಚಾಲಕನನ್ನು ಪತ್ತೆ ಹಚ್ಚಿ ೭೫ ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರಕ್ಕೆ ಬೆಂಗಳೂರಿನಿಂದ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಪಾರ್ಸೆಲ್ ಮೂಲಕ ಸಾಗಾಟ ಮಾಡಿಕೊಂಡು ಅದನ್ನು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಟೋ ರಿಕ್ಷಾದಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಾ. ೪ರಂದು ಮಂಗಳೂರು ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ರಿಕ್ಷಾವನ್ನು ಪತ್ತೆ ಹಚ್ಚಿ ಮೊಹಮ್ಮದ್ ಅಬ್ದುಲ್ ಜಲೀಲ್(೩೨) ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ ೩,೭೫,೦೦೦ ರೂ. ಮೌಲ್ಯದ ೭೫ ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, ಮೊಬೈಲ್ ಫೋನ್, ಕೆಎ-೧೯-ಎಡಿ-೩೫೩೧ ಬಜಾಜ್ ಆಟೋ ರಿಕ್ಷಾವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. ೫ ಲಕ್ಷ ಆಗಬಹುದು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ಬೆಂಗಳೂರಿನಿಂದ ಬಸ್‌ನಲ್ಲಿ ಪಾರ್ಸೆಲ್ ಮೂಲಕ ಮಾದಕ ವಸ್ತುವಾದ ಎಂಡಿಎಂಎ ಸಾಗಾಟ ಮಾಡಿಕೊಂಡು ಮಂಗಳೂರು ನಗರದಲ್ಲಿನ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಈ ಮಾದಕ ವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.