ಪೊಲೀಸ್ ವಸತಿಗೃಹಕ್ಕೇ ಕನ್ನ!

0
16

ಉಡುಪಿ: ನಗರದ ಚಂದು ಮೈದಾನಿನಲ್ಲಿರುವ ಜಿಲ್ಲಾ ಮೀಸಲು ಸಶಸ್ತ್ರ ಪಡೆ(ಡಿಎಆರ್) ಪೊಲೀಸ್ ವಸತಿ ಗೃಹಕ್ಕೆ ಸೋಮವಾರ ನಸುಕಿನ ವೇಳೆ ನುಗ್ಗಿದ ಕಳ್ಳರು ಕೆಲವು ಸೊತ್ತುಗಳನ್ನು ಕಳವು ಮಾಡಿದ್ದಾರೆ‌.
ಇಲ್ಲಿನ ಮೂರು ವಸತಿ ಸಮುಚ್ಛಯದಲ್ಲಿ ಒಟ್ಟು 28 ಮನೆಗಳಿದ್ದು, ಅದರಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳಾದ ರಾಘವೇಂದ್ರ ಹಾಗೂ ರವಿರಾಜ್ ಎಂಬವರ ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಕಪಾಟಿನ ಬೀಗ ತೆರೆದು ಸೊತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡುಬಂದಿದೆ.
ರಾಘವೇಂದ್ರ ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದು, ಅವರ ಮನೆಯಲ್ಲಿ ಯಾರು ಇರಲಿಲ್ಲ. ಅದೇ ರೀತಿ ರವಿರಾಜ್ ಫೆ. 23ರಂದು ತಡರಾತ್ರಿ ಮನೆಗೆ ಬೀಗ ಹಾಕಿ ಕರ್ತವ್ಯಕ್ಕೆ ತೆರಳಿದ್ದರು. ಈ ವೇಳೆ ನುಗ್ಗಿದ ಕಳ್ಳರು, ರಾಘವೇಂದ್ರ ಮನೆಯಲ್ಲಿದ್ದ ಬೆಳ್ಳಿಯ ಕಾಲಗೆಜ್ಜೆ ಹಾಗೂ ಚಿಲ್ಲರೆ ಹಣವನ್ನು ಕಳವು ಮಾಡಿದ್ದಾರೆ. ರವಿರಾಜ್ ಮನೆಯಲ್ಲಿ ಯಾವುದೇ ಸೊತ್ತುಗಳು ಕಳುವಾಗಿಲ್ಲ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಉಡುಪಿ ನಗರ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು ತನಿಖೆ ಮುಂದುವರಿದಿದೆ.

Previous articleಕರ್ನಾಟಕ ಬಸ್‌ಗಳ ಮೇಲೆ ಪುಂಡಾಟಿಕೆ
Next articleಮಸಿ ಬಳಿಯೋದರಲ್ಲಿ ಅರ್ಥವಿಲ್ಲ