ಕಾರ್ಖಾನೆ ಸ್ಥಾಪನೆಯಿಂದ ಸ್ಮಶಾನಕ್ಕೆ ಹೋಗುವವರ ಸಂಖ್ಯೆ ಹೆಚ್ಚಳ: ಗವಿಶ್ರೀ ಕಣ್ಣೀರು

0
20

ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ಥಾಪನೆಗೆ ವಿರೋಧಿಸಿ ಕೊಪ್ಪಳ ಬಂದ್

ಕೊಪ್ಪಳ: ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ಥಾಪನೆಗೆ ವಿರೋಧಿಸಿ ನಡೆದ ಕೊಪ್ಪಳ ಬಂದ್ ಹಿನ್ನೆಲೆಯಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಕೊಪ್ಪಳ ಬಂದ್ ವೇಳೆ ಬೃಹತ್ ಜಾಥಾ ನಡೆಯಿತು. ಗವಿಮಠದ ಆವರಣದಲ್ಲಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಜಾಥಾಕ್ಕೆ ಚಾಲನೆ ನೀಡಿದರು. ಗವಿಮಠ ಆವರಣ ಗಡಿಯಾರ ಕಂಬ, ಜವಾಹರ ರಸ್ತೆ ಹಾಗೂ ಅಶೋಕ ಸರ್ಕಲ್ ಮೂಲಕ ತಾಲ್ಲೂಕು ಕ್ರೀಡಾಂಗಣದ ತನಕ ಜಾಥಾ ಜರುಗಿತು. ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಿತು, ಸಭೆಯಲ್ಲಿ ಸ್ಟೀಲ್ ಪ್ಯಾಕ್ಟರಿಗಳಿಂದ ಸುತ್ತಮುತ್ತಲಿನ ಜನರ ಮೇಲೆ ಆಗುತ್ತಿರುವ ದುಷ್ಪರಿಣಾಮ ಬಗ್ಗೆ ವಿಡಿಯೋ ಪ್ರದರ್ಶನ ನಡೆಯಿತು. ವಿಡಿಯೋದಲ್ಲಿ ಧೂಳು ಮತ್ತು ಹೊಗೆಯಿಂದ ಜನರು ಸಂಕಷ್ಟ ಪಡುತ್ತಿರುವ ದೃಶ್ಯಗಳನ್ನು ನೋಡುತ್ತಿದಂತೆ ಗವಿಮಠದ ಸ್ವಾಮೀಜಿಗಳು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ, ಬಳಿಕ ಸಭೆ ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ಕೊಪ್ಪಳದಲ್ಲಿ ಯಾವುದೇ ಕಾರ್ಖಾನೆ ಆರಂಭಕ್ಕೆ ನನ್ನ ವಿರೋಧವಿದೆ, ದೇಶದ ಪ್ರಗತಿಗೆ ಕಾರ್ಖಾನೆಗಳು ಬೇಕು. ಆದರೆ, ಯಾವ ಭಾಗದಲ್ಲಿ ಎಷ್ಟು ಮುಖ್ಯ ಅಂತ ನೋಡಬೇಕು. ಕೊಪ್ಪಳ ತಾಲೂಕಿನಲ್ಲಿ 202 ಕಾರ್ಖಾನೆಗಳಿವೆ. ಬರೀ ಕಾರ್ಖಾನೆಗಳೇ ಇದ್ದರೇ ಜನ ಇರುವುದಾರು ಎಲ್ಲಿ? ಇದೇ ರೀತಿ ಕಾರ್ಖಾನೆ ಆರಂಭವಾದರೆ ಕೊಪ್ಪಳ ನರಕವಾಗುತ್ತದೆ. ತೊಟ್ಟಿಲು ತೂಗುವ ಸಂಖ್ಯೆಗಿಂತ ಸ್ಮಶಾನಕ್ಕೆ ಹೋಗುವವರ ಸಂಖ್ಯೆಯೇ ಹೆಚ್ಚಾಗುತ್ತದೆ. ಫ್ಯಾಕ್ಟರಿಯಿಂದ ಜನರ ೧೫ ವರ್ಷ ಆಯಸ್ಸು ಕಡಿಮೆ ಆಗುತ್ತದೆ, ಸುತ್ತಮುತ್ತಲಿನ ಜನರ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ಸಣ್ಣ ಮಕ್ಕಳಿಗೆ ಕ್ಯಾನ್ಸರ್, ಅಸ್ತಮಾ ಬರುತ್ತಿದೆ. ಇರುವ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ನೀಡಬಾರದು. ಹೊಗೆ ಉಗಳುವ ಕಾರ್ಖಾನೆಗಳನ್ನು ನಮಗೆ ಕಳಿಸುವ ಕೆಲಸ ಸರ್ಕಾರ ಮಾಡಬಾರದು. ಸರ್ಕಾರ ಬಂಡವಾಳ ಶಾಹಿಗಳ ಪರವಾಗಿರಬಾರದು. ಸರ್ಕಾರ ಬಡವರ ಪರ ಇರಬೇಕು. ಸರ್ಕಾರ ಕೊಪ್ಪಳ ಜನರನ್ನು ಜೋಪಾನ ಮಾಡಬೇಕಿದೆ. ಸರ್ಕಾರ ತಾಯಿಯಿದ್ದಂತೆ, ವಿಷ‌ ಹಾಕುತ್ತೀರೋ ಅಥವಾ ಅಮೃತ ಹಾಕುತ್ತಿರೋ ನಿಮಗೆ ಬಿಟ್ಟಿದ್ದು. ಕೊಪ್ಪಳ ಜನರಿಗೆ ಬದುಕಲು ಅವಕಾಶ ನೀಡಿ, ಅವರ ಸರ್ಕಾರದಲ್ಲಿ ಅನುಮತಿ ಸಿಕ್ಕಿದ್ದು, ಇವರ ಸರ್ಕಾರದಲ್ಲಿ ಸಿಕ್ಕಿದ್ದು ಎನ್ನುವ ಟೀಕೆ-ಟಿಪ್ಪಣಿ ಬೇಡ, ಎಲ್ಲರೂ ಬದುಕಬೇಕೆಂದರೆ ಫ್ಯಾಕ್ಟರಿ ಬೇಡ. ತೊಟ್ಟಿಲು ತೂಗುವ ಕೈ ಹೆಣ ಹೊರುವಂತೆ ಆಗಬಾರದು ಎಂದು ವಾಗ್ದಾಳಿ ಮಾಡಿದರು. ಇದೇ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನಾಯಕರು ಹಾಗೂ ಹಲವು ಧರ್ಮಗಳ ಗುರುಗಳು ಮತ್ತು ಪಾಲ್ಗೊಂಡಿದ್ದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕಾರ್ಖಾನೆ ಓಡಿಸಿ ಕೊಪ್ಪಳ ಉಳಿಸಿ, ಧೂಳು ಮುಕ್ತ ಕೊಪ್ಪಳ ನಮ್ಮ ಗುರಿ ಎನ್ನುವ ಘೋಷಣೆಗಳನ್ನು ಜಾಥಾದಲ್ಲಿ ಕೂಗಿದರು.

Previous articleಯುಗಾದಿಗೆ ಎಲ್ಲವನ್ನು ಹೇಳ್ತೇನೆ
Next articleಸರ್ಕಾರ ದಿವಾಳಿ ಆಗಿಲ್ಲ, ದಾಖಲೆ ತೆಗೆದುಕೊಂಡು ಬನ್ನಿ: ಬಿಜೆಪಿಗೆ ಖರ್ಗೆ ಸವಾಲ್