ಬೆಳಗಾವಿ: ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಕುಂಭಮೇಳಕ್ಕೆ ತೆರಳುತ್ತಿದ್ದ ಗೋಕಾಕ್ ಮೂಲದ ಆರು ಜನ ಪ್ರಯಾಣಿಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಸ್ಗೆ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗೋಕಾಕ್ ನಗರದ ಆರು ಪ್ರಯಾಣಿಕರು ಮೃತಪಟ್ಟಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ. ಕ್ರೂಸರ್ ವಾಹನದಲ್ಲಿ ಒಟ್ಟು 8 ಜನ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದ್ದು, ಅವರ ಪೈಕಿ ಆರು ಜನ ಮೃತಪಟ್ಟಿದ್ದಾರೆ, ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ ಗೌಡರ (50), ಸುನೀಲ್ ಶೇಡಶ್ಯಾಳೆ (45), ಬಸವರಾಜ್ ಕುರ್ತಿ (63), ಬಸವರಾಜ್ ದೊಡಮಾಳ್ (49), ಈರಣ್ಣ ಶೇಬಿನಕಟ್ಟಿ (27), ವಿರೂಪಾಕ್ಷ ಗುಮತಿ (61) ಮೃತರು ದುರ್ದೈವಿಗಳು. ಗಾಯಗೊಂಡ ಮುಸ್ತಾಕ್ ಶಿಂಧಿಕುರಬೇಟ, ಸದಾಶಿವ ಇಬ್ಬರನ್ನು ಜಬಲ್ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.