ನಾನು ಉಳಿಕೆ ಬಜೆಟ್ ಮಾಡಿದ್ದೆ, ಕಾಂಗ್ರೆಸ್ ಸರ್ಕಾರ ಕೊರತೆ ಬಜೆಟ್…
ಹುಬ್ಬಳ್ಳಿ : ರಾಜ್ಯದ ಆರ್ಥಿಕ ಸ್ಥಿತಿ ಹಾಳಾಗಿದೆ. ಅವರೇ ಘೋಷಿಸಿದ ಗ್ಯಾರಂಟಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಆಗುತ್ತಿಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಕೆಲ ಅಂಶ ಉಲ್ಲೇಖಿಸಿ ವಿಷಯ ಪ್ರಸ್ತಾಪಿಸಿದರೆ ಮುಖ್ಯಮಂತ್ರಿ ನನಗೆ ಆರ್ಥಿಕ ತಜ್ಞ ಎಂದು ಹೇಳಿದ್ದಾರೆ. ನಾನೇನೂ ಅರ್ಥಿಕ ತಜ್ಞ ಅಲ್ಲ. ಸಾಮಾನ್ಯ ನಾಗರಿಕ. ಮುಖ್ಯಮಂತ್ರಿಗೆ ಸಹನಾ ಶಕ್ತಿ ಕಡಿಮೆ ಆಗಿದೆ ಎಂಬುದು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದಾಗ ಉಳಿಕೆ ಬಜೆಟ್ ಮಾಡಿದ್ದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೊರತೆ ಬಜೆಟ್ ಕಳೆದ ಬಾರಿ ಮಂಡಿಸಿದ್ದರು. 18000 ಕೋಟಿ ಸಾಲ ಪ್ರಸ್ತಾಪಿಸಿದ್ದರು. ಕಳೆದ ಬಾರಿ ಬಜೆಟ್‌ನಲ್ಲಿ ಏನು ಘೋಷಣೆ ಮಾಡಿದ್ದರು. ಯಾವುದು ಜಾರಿಯಾಗಿದೆ? ಎಷ್ಟು ಖರ್ಚಾಗಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಶ್ವೇತಪತ್ರ ಹೊರಡಿಸಬೇಕು ಎಂದು ಹೇಳಿದರು.
ಎಸ್‌ಸಿಪಿ, ಟಿಎಸ್‌ಪಿಗೆ ನಿಗದಿಯಾದ 25 ಸಾವಿರ ಕೋಟಿಯನ್ನು ಬೇರೆ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ಬಳಸಿದೆ. ಅಷ್ಟು ಮೊತ್ತದ ಹಣ ಎಸ್ ಸಿಪಿ ಟಿ ಎಸ್ ಪಿ ಗೆ ಕೊರತೆ ಆಗಿದೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆ ನಿಗಮಗಳಿಗೆ, ಹಿಂದುಳಿದ ವರ್ಗದ ಯೋಜನೆಗೂ ಹಣ ಬಿಡುಗಡೆ ಮಾಡಿಲ್ಲ. ಸಾಮಾಜಿಕ ನ್ಯಾಯದ ಬಗ್ಗೆ ಅಷ್ಟೇ ಮಾತನಾಡಿದರೆ ಸಾಕೇ .ಹಣ ಬಿಡುಗಡೆ ಮಾಡುವುದು ಬೇಡವೆ ಎಂದು ಪ್ರಶ್ನಿಸಿದರು.
ಹಾಲಿನ ದರ, ಮೆಟ್ರೋ ದರ, ಬಸ್ ಟಿಕೇಟ್ ದರ , ಸ್ಟ್ಯಾಂಪ್ ಡ್ಯುಟಿ, ಸಾರಿಗೆ ಇಲಾಖೆಯಲ್ಲಿ ನೋಂದಣಿ ಶುಲ್ಕ ಹೆಚ್ಚಳ ಸೇರಿದಂತೆ ಇನ್ನೂ ಅನೇಕದರಲ್ಲಿಯೂ ಸರ್ಕಾರ ಬೆಲೆ ಹೆಚ್ಚಳ ಮಾಡಿದೆ. ಇಷ್ಟಾಗಿಯೂ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿ, ಎಸ್ ಸಿಪಿ, ಟಿಎಸ್ ಪಿಗೆ ನಿಗದಿಪಿಡಿಸಿದ ಹಣ ಬೇರೆಯದ್ದಕ್ಕೆ ಬಳಕ್ಕೆ ಮಾಡಿದ್ದು ಸೇರಿ ಸರ್ಕಾರದ ಜನ ವಿರೋಧಿ ಧೋರಣೆ ಖಂಡಿಸಿ ಬಜೆಟ್ ಪೂರ್ವ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.