ಮುಡಾ ಪ್ರಕರಣ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

0
35

ಧಾರವಾಡ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಬದಲಿ ನಿವೇಶನ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ಸಮನ್ಸ್ ನೀಡಿರುವ ಪ್ರಕರಣದ ತೀರ್ಪನ್ನು ಧಾರವಾಡ ಹೈಕೋರ್ಟ್ ಪೀಠ ಕಾಯ್ದಿರಿಸಿದೆ.
ಗುರುವಾರ ಧಾರವಾಡ ಹೈಕೋರ್ಟ್‌ನ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದಲ್ಲಿ ವಿಚಾರಣೆ ನಡೆಯಿತು. ವಿಚಾರಣೆಯಲ್ಲಿ ಭೈರತಿ ಸುರೇಶ ಪರ ಹಿರಿಯ ವಕೀಲ ಸಿ.ವಿ. ನಾಗೇಶ, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಪರ ಸಂದೇಶ ಚೌಟ್ ವಾದ ಮಾಡಿದರು. ಇಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ ಕಾಮತ್ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ತೀರ್ಪನ್ನು ಕಾಯ್ದಿರಿಸಿದರು.
ಮುಡಾದಲ್ಲಿ ೧೪ ಬದಲಿ ಸೈಟ್‌ಗಳನ್ನು ಪಡೆದುಕೊಂಡಿರುವ ಬಗ್ಗೆ ಸ್ನೇಹಮಯಿ ಕೃಷ್ಣ ದಾಖಲಿಸಿದ್ದ ದೂರಿನ ಕುರಿತಾಗಿ ಲೋಕಾಯುಕ್ತ ತನಿಖೆ ಆರಂಭಗೊಳ್ಳುತ್ತಿದ್ದಂತೆಯೇ, ಇಡಿ ಕೂಡ ಇದರಲ್ಲಿ ಪ್ರವೇಶಿಸಿ ಪ್ರಕರಣ ದಾಖಲಿಸಿಕೊಂಡಿತ್ತು. ಜನವರಿ 27ರಂದು ಸಿಎಂ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶಗೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಆಗಿತ್ತು. ಆದರೆ ಈ ಸಮನ್ಸ್‌ಗೆ ತಡೆ ಕೋರಿ ಇಬ್ಬರೂ ಹೈಕೋರ್ಟ್ ಮೊರೆ ಹೋಗಿದ್ದಾಗ, ಹೈಕೋರ್ಟ್ ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಿತ್ತು.

Previous articleಹೆಜ್ಜೇನು ದಾಳಿಗೆ ರೈತ ಸಾವು
Next article22ರಂದು ನೃತ್ಯಕಥಾ ನೃತ್ಯೋತ್ಸವ