ಸಂವಿಧಾನ ವಿರೋಧಿ ನಡೆಯ ಅಲ್ಪಸಂಖ್ಯಾತರ ವಿರುದ್ಧ ಸಿದ್ದರಾಮಯ್ಯ ಮೌನ ಖಂಡನೀಯ

ಉಡುಪಿ: ಸಂವಿಧಾನದ ಬಗ್ಗೆ ಮಾತನಾಡುತ್ತಾ, ಅದರ ವಿರೋಧಿ ನಡೆ ತೋರುತ್ತಿರುವ ಅಲ್ಪಸಂಖ್ಯಾತರ ವಿರುದ್ದ ಸಿದ್ದರಾಮಯ್ಯ ಸರಕಾರ ಮೌನಕ್ಕೆ ಜಾರಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಿಡಿಕಾರಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ವೀರ್ ಸೇಠ್ ಶಾಸಕನಾಗಿರುವ ಕ್ಷೇತ್ರದಲ್ಲಿ 200ರಿಂದ 300 ಮಂದಿ ಅಲ್ಪಸಂಖ್ಯಾತರು ಪೋಲಿಸ್ ಅಧಿಕಾರಿಯ ಕಾರಿಗೆ ಕಲ್ಲು ತೂರಿ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಲ್ಲದೇ ಪೊಲೀಸ್ ಠಾಣೆಗೂ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ರಾಜ್ಯ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಹಿಂದೂ ವಿರೋಧಿ ಮತ್ತು ಅಲ್ಪಸಂಖ್ಯಾತರನ್ನು ಓಲೈಸುವ ನೀತಿ ಅನುಸರಿಸುತ್ತಿರುವಾಗಲೇ ಪ್ರತಿನಿತ್ಯವೂ ಅಲ್ಪಸಂಖ್ಯಾತರು ನಮಗೆ ರಕ್ಷಣೆ ಕೊಡುವ ಸರ್ಕಾರ ಇದೆ ಎನ್ನುವ ಧೈರ್ಯದಿಂದ ಕಾನೂನು ವಿರೋಧಿ, ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿರುವ ಅನೇಕ ನಿದರ್ಶನ ನಮ್ಮ ಮುಂದಿದೆ. ಅದಕ್ಕೆ ನೇರವಾಗಿ ಸಿದ್ದರಾಮಯ್ಯ ಸರ್ಕಾರ ಹೊಣೆ ಎಂದು ಪ್ರಮೋದ್ ತಿಳಿಸಿದರು.

ಕೆಲವು ದಿನಗಳ ಹಿಂದೆ ಸಚಿವ ಜಮೀರ್ ಅಹಮ್ಮದ್ ಕ್ಷೇತ್ರದಲ್ಲಿ ದನದ ಕೆಚ್ಚಲು ಹಾಗೂ ಕಾಲು ಕಡಿಯುವ ಮೂಲಕ ವಿಕೃತಿ ಮೆರೆದಿದ್ದರು. ಇಂಥ ಅನೇಕ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದ್ದರೂ ಕಠಿಣ ಕಾನೂನು ಕ್ರಮ ಜರುಗಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಪ್ರಮೋದ್ ಮಧ್ವರಾಜ್ ಆಕ್ರೋಶ ವ್ಯಕ್ತಪಡಿಸಿದರು.