ಹಳಿಯಾಳ: ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯಾಗಿ ಎರಡೇ ವರ್ಷದವರೆಗೆ ಅಥವಾ ಎರಡೂವರೆ ವರ್ಷದವರೆಗೆ ಯಾರೂ ಆಯ್ಕೆ ಮಾಡಲಿಲ್ಲ, ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷದ ಸಭೆಯು ಆಯ್ಕೆ ಮಾಡಿದೆ. ಶಾಸನ ಸಭೆಯ ಅವಧಿಯೇ ಐದು ವರ್ಷಗಳವರೆಗೆ ಇರುವಾಗ ಅವರು ಸಹ ಐದು ವರ್ಷ ಇರಬೇಕಲ್ಲವೇ? ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಪ್ರತಿಕ್ರಿಯೆ ನೀಡಿದರು.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವರಾದ ಎಂ.ಬಿ.ಪಾಟೀಲ ಹಾಗೂ ಡಾ.ಜಿ.ಪರಮೇಶ್ವರ ಅವರು ನೀಡಿದ ಹೇಳಿಕೆ ಸರಿಯಾಗಿದ್ದು, ಅದರಲ್ಲಿ ತಪ್ಪೇನೂ ಇಲ್ಲ. ಮೇಲಿಂದ ಮೇಲೆ ಮುಖ್ಯಮಂತ್ರಿ ಬದಲಾವಣೆ ವಿಷಯ ಮಾಧ್ಯಮದಲ್ಲಿ ಚರ್ಚೆಯಾಗುತ್ತಿರುವುದು ಕೇಳಿ ನನಗೆ ಆಶ್ಚರ್ಯವಾಗುತ್ತದೆ. ಮುಖ್ಯಮಂತ್ರಿಗೆ ಯಾರೂ ಪ್ರತಿಸ್ಪರ್ಧಿಯು ಇಲ್ಲ, ಯಾರೂ ಈ ಬಗ್ಗೆ ಹೇಳಿಕೆಯನ್ನು ಸಹ ನೀಡಲಿಲ್ಲ ಎಂದರು.
ಮುಖ್ಯಮಂತ್ರಿ ಆಯ್ಕೆಯ ಸಮಯದಲ್ಲಿ ಎರಡೂವರೆ ವರ್ಷ ಅಧಿಕಾರ ಎಂದು ನಮ್ಮ ವರಿಷ್ಠರು ಹೇಳಲಿಲ್ಲ, ಅಂದು ನಡೆದ ಶಾಸಕಾಂಗ ಸಭೆಯಲ್ಲಿ ನಿಗದಿತ ಅವಧಿಯಾಗಲಿ, ಕಾಲಮಿತಿಯ ಬಗ್ಗೆ ಚರ್ಚೆಯಾಗಲಿಲ್ಲ, ಇದೊಂದು ಸತ್ಯಕ್ಕೆ ದೂರವಾದ ಮಾತು, ಮಾಧ್ಯಮದವರ ಕಲ್ಪನೆಯಾಗಿದೆ. ದಯವಿಟ್ಟು ಮಾಧ್ಯಮದವರು ವಿನಾಕಾರಣ ಗೊಂದಲ ಸೃಷ್ಟಿಸಬೇಡಿ ಎಂದರು.