ವಿಜಯಪುರ: ಭೀಮಾತೀರದ ಕುಖ್ಯಾತ ಹಂತಕ ಭಾಗಪ್ಪ ಹರಿಜನ ಬರ್ಬರ ಹತ್ಯೆ ಪ್ರಕರಣವನ್ನು ಮೂರು ದಿನಗಳಲ್ಲಿ ಬೇಧಿಸಿರುವ ವಿಜಯಪುರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪಿಂಟೂ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಮೂಲತಃ ಅಗರಖೇಡದ ಹಾಲಿವಸ್ತಿ ವಿಜಯಪುರದ ಪ್ರಕಾಶ ಉಫ್ ಪಿಂಟೂ ಲಕ್ಷ್ಮಣ ಮೇಲಿನಕೇರಿ(೨೬), ಹೊರ್ತಿಯ ರಾಹುಲ ಭಿಮಾಶಂಕರ ತಳಕೇರಿ(೨೦), ಅಗರಖೇಡದ ಸುದೀಪ ರೇಣುಕಾ ಕಾಂಬಳೆ(೨೦) ಹಾಗೂ ಬೈಲಹೊಂಗಲದ ಬಸವೇಶ್ವರ ಆಶ್ರಯ ಕಾಲೋನಿಯ ಗದಿಗೆಪ್ಪ ಉಫ್ ಮಣಿಕಂಠ ಶಂಕ್ರಪ್ಪ ಬೆನಕೊಪ್ಪ ಎಂದು ಗುರುತಿಸಲಾಗಿದೆ.
ಆರೋಪಿಗಳಲ್ಲಿ ಮೂವರು ಇಂಡಿ ತಾಲೂಕಿನವರು ಹಾಗೂ ಒಬ್ಬ ಬೈಲಹೊಂಗಲದವನು. ಹೊರ್ತಿಯ ರಾಹುಲ ತಳಕೇರಿ ಮೇಲೆ ೨೦೨೨ ರಲ್ಲಿ ಒಂದು ಕೊಲೆ ಯತ್ನದ ಪ್ರಕರಣ ದಾಖಲಾಗಿದ್ದು ಹೊರತುಪಡಿಸಿದರೆ ಉಳಿದ ಮೂವರಿಗೆ ಯಾವುದೇ ಅಪರಾಧಿಕ ಹಿನ್ನೆಲೆ ಇಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರು ತಿಂಗಳ ಹಿಂದೆ ಕೊಲೆಯಾದ ವಕೀಲ ರವಿ ಮೇಲಿನಕೇರಿ ಸಹೋದರನಾಗಿರುವ ಪಿಂಟೂ ತನ್ನ ಅಣ್ಣನ ಕೊಲೆಗೆ ಭಾಗಪ್ಪನೇ ಕಾರಣ ಎಂದು ದ್ವೇಷ ಸಾಧಿಸಿ ತನ್ನ ಸಂಬಂಧಿಕರ ತಂಡವನ್ನು ಕಟ್ಟಿಕೊಂಡು ಬಂದು ಹತ್ಯೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.