ದಾವಣಗೆರೆ: ಬಿಜೆಪಿ ಅಧ್ಯಕ್ಷ ಗಾದಿ ವಿಷಯ ಸೇರಿದಂತೆ ಪಕ್ಷದಲ್ಲಿರುವ ಎಲ್ಲಾ ಗೊಂದಲಗಳಿಗೆ ಶೀಘ್ರ ತೆರೆ ಬೀಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೊನ್ನಾಳಿ ತಾಲ್ಲೂಕು ಸೂರಗೊಂಡನಕೊಪ್ಪದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆಯೇ ಹೇಳಿಕೆ ನೀಡಿದ್ದೆ. ಅದರಂತೆ ಎಲ್ಲವೂ ಬಗೆಹರಿಯುತ್ತದೆ. ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದರು.
ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ದೆಹಲಿಗೆ ಹೋಗಿ ವರಿಷ್ಠರ ಭೇಟಿಮಾಡಿ ಬಂದಿದ್ದೇನೆ. ಕುಂಭ ಮೇಳಕ್ಕೂ ಹೋಗಿ ಬಂದಿದ್ದೇನೆ. ಎಲ್ಲ ವಿಷಯಗಳನ್ನು ತಿಳಿಸಿದ್ದೇನೆ. ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ಸೂಚನೆ ನನಗೆ ಸಿಕ್ಕಿದೆ ಎಂದರು.
ಬಂಡಾಯ ನಾಯಕ ಬಸವನಗೌಡ ಪಾಟೀಲ್‌ರ ಉಚ್ಛಾಟನೆ ಕುರಿತು ಉತ್ತರಿಸಿದ ಅವರು, ಅವರಿಗೆ ನೋಟೀಸ್ ಕೊಟ್ಟಿರುವುದು ಹೈಕಮಾಂಡ್ ನಾನಲ್ಲ. ಕೇಂದ್ರ ಶಿಸ್ತು ಸಮಿತಿ ನೋಟೀಸ್ ನೀಡಿದೆ. ಹೀಗಾಗಿ ಈ ಕುರಿತು ನಾನು ಏನೂ ಮಾತನಾಡಲ್ಲ ಎಂದರು.