ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್‌

ಹುಬ್ಬಳ್ಳಿ: ಭಕ್ತಾದಿಗಳು ಹಾಗೂ ಸಾರ್ವಜನಿಕರ ಬೇಡಿಕೆಯ ಮೇರೆಗೆ ಬರುವ ಅಮಾವಾಸ್ಯೆಯವರೆಗೆ ಪ್ರತಿ ರವಿವಾರ, ಮಂಗಳವಾರ ಹಾಗೂ ಶುಕ್ರವಾರದಂದು ಹುಬ್ಬಳ್ಳಿ ಹಾಗೂ ನವಲಗುಂದದಿಂದ ಯಲ್ಲಮ್ಮನಗುಡ್ಡಕ್ಕೆ ನೇರ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಭಾರತ ಹುಣ್ಣಿಮೆ ಜಾತ್ರೆ ಪ್ರಯುಕ್ತ ಬೆಳಗಾವಿ ಜಿಲ್ಲೆಯ ಸೌದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಹುಬ್ಬಳ್ಳಿ ಮತ್ತು ನವಲಗುಂದದಿಂದ ಯಲ್ಲಮ್ಮನಗುಡ್ಡಕ್ಕೆ ಕಲ್ಪಿಸಲಾಗಿರುವ ಜಾತ್ರೆ ವಿಶೇಷ ಬಸ್‌ಗಳಿಗೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಫೆಬ್ರವರಿ 9ರಿಂದ 14ರವರೆಗೆ ಜಾತ್ರ ವಿಶೇಷ ಬಸ್‌ಗಳು 303 ಸರತಿಗಳ ಸಂಚಾರ ಮಾಡಿದ್ದು 25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಪ್ರಯಾಣ ಮಾಡಿದ್ದಾರೆ.
ಭಕ್ತಾದಿಗಳು ಹಾಗೂ ಸಾರ್ವಜನಿಕರ ಬೇಡಿಕೆಯ‌ ಮೇರೆಗೆ ಬರುವ ಅಮಾವಾಸ್ಯೆಯವರೆಗೆ ಪ್ರತಿ ರವಿವಾರ, ಮಂಗಳವಾರ ಹಾಗೂ ಶುಕ್ರವಾರಗಳಂದು ಅಂದರೆ ಫೆಬ್ರವರಿ 16, 18, 21, 23, 25 ಹಾಗೂ 28ರಂದು ವಿಶೇಷ ಬಸ್‌ಗಳ ವ್ಯವಸ್ಥೆ ಮುಂದುವರೆಸಲಾಗಿದೆ. ಈ ಬಸ್‌ಗಳು ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣ ಹಾಗೂ ನವಲಗುಂದ ಬಸ್ ನಿಲ್ದಾಣದಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ನೇರ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.