ಮಂಗಳೂರು: ಚಾರ್ಮಾಡಿ ಬಳಿಯ ಅರಣ್ಯದಲ್ಲಿ ಅರೆಪ್ರಜ್ಞಾ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಹೆಣ್ಣಾನೆ ನಿನ್ನೆ ರಾತ್ರಿ ಮೃತಪಟ್ಟಿದೆ.
ಕಳೆದ 2 ದಿನದಿಂದ ಅನಾರು ಪ್ರದೇಶದ ಗುಡ್ಡದಲ್ಲಿ ಭಾರೀ ನಿಧಾನವಾಗಿ ಚಲಿಸುತ್ತಿದ್ದ ಆನೆಯ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಬಳಿಕ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಮೊದಲೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ಸಿಕ್ಕಿದ್ದರಿಂದ ಆನೆಯ ಮೇಲೆ ನಿಗಾ ಇಟ್ಟಿದ್ದರು. ನಿನ್ನೆ ಆನೆ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದಾಗಲೂ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪಶು ವೈದ್ಯರಾದ ಡಾ. ಯಶಸ್ವಿಯವರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದ್ದಾರೆ. ಆದರೆ ಚಿಂತಾಜನಕ ಸ್ಥಿತಿಯಲ್ಲಿದ್ದ ಆನೆ ನಿನ್ನೆ ರಾತ್ರಿ ಸುಮಾರು 11ಗಂಟೆ ವೇಳೆಗೆ ಉಸಿರು ಚೆಲ್ಲಿದೆ.
ಆನೆಯನ್ನು ಈ ಪರಿಸ್ಥಿಯಲ್ಲಿ ನೋಡಿದ ಸ್ಥಳಿಯರು ಯಾರೋ ಕಾಡಾನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಶಂಕಿಸಿದ್ದರು. ಆದರೆ ಈ ಬಗ್ಗೆ ಸ್ಪಷ್ಟನ ನೀಡಿದ ಡಿಎಫ್ಒ ಅಂತೋಣಿ ಮರಿಯಪ್ಪ ಅವರು ಆನೆಯ ದೇಹದ ಹೊರಗಡೆ ಯಾವುದೇ ಗಾಯವಿಲ್ಲ, ದೇಹದ ಒಳಗೆ ಬಹು ಅಂಗಾಂಗ ವೈಫಲ್ಯ ಇರುವುದು ಕಂಡು ಬಂದಿದೆ. ಕಳೆದ ಎರಡು ತಿಂಗಳಿಂದ ಸರಿಯಾದ ಆಹಾರ ಸೇವಿಸುತ್ತಿರಲ್ಲಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಭದ್ರತಾ ದೃಷ್ಟಿಯಿಂದ ಆನೆಯ ಎರಡು ದಂತವನ್ನು ಬೆಳ್ತಂಗಡಿ ಅರಣ್ಯ ಇಲಾಖೆ ವಶ ಪಡೆದಿದೆ. ಬೆಳ್ತಂಗಡಿ ಡಾ. ರವಿ ಕುಮಾರ್. ಎಮ್, ಚಾರ್ಮಾಡಿ ಡಾ.ಯತೀಶ್ ಕುಮಾರ್. ಎಮ್.ಎಸ್ ಮರಣೋತ್ತರ ಪರೀಕ್ಷೆ ನಡೆಸಿದರು.