ಗದಗ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಸುಗ್ರೀವಾಜ್ಞೆ ಮೂಲಕ ಮೀಟರ್ ಬಡ್ಡಿದಂಧೆಕೋರರಿಗೆ ಮೂಗುದಾರ ಹಾಕಿದ್ದನ್ನು ಸ್ವಾಗತಿಸಿ ಪತ್ರಿಕಾ ಭವನದಲ್ಲಿ ಸೌಜನ್ಯ ಹೋರಾಟ ಸಮಿತಿ ಮತ್ತು ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗಲೇ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ನೂರಾರು ಮಹಿಳೆಯರು ಪತ್ರಿಕಾ ಭವನದ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಧರ್ಮಸ್ಥಳ ಸಂಘದ ಮಹಿಳಾ ಪ್ರತಿನಿಧಿಗಳಿಂದ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪತ್ರಿಕಾ ಭವನದ ಮುಂದೆ ಕೆಲ ಕಾಲ ಹೈಡ್ರಾಮಾ ನಡೆಯಿತು. ಕೊನೆಗೆ ಗಿರೀಶ ಮಟ್ಟೆಣ್ಣವರ ಮತ್ತು ಕೆಲ ರೈತ ಮುಖಂಡರನ್ನು ಪೊಲೀಸರ ರಕ್ಷಣೆಯಲ್ಲಿ ಹೊರಗೆ ಕರೆದೊಯ್ಯಲಾಯಿತು.
ಏನಾಗಿತ್ತು?: ಪತ್ರಿಕಾಗೋಷ್ಠಿಯಲ್ಲಿ ರಾಜ್ಯದಲ್ಲಿ ಮೀಟರ್ ಬಡ್ಡಿ ಕುಳಗಳ ಹಾವಳಿ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪುಗಳಿದ, ವಿವಿಧ ಫೈನಾನ್ಸ್‌ಗಳ ವಿರುದ್ಧ ಸಾಲ ನೀಡಿ ವಸೂಲಾತಿ ವಿಷಯವಾಗಿ ಮಾತನಾಡಿದರು.
ಸಾಲದ ಮೂಲಕ ಗ್ರಾಮೀಣ ಭಾಗದ ಮುಗ್ಧ ಮಹಿಳೆಯರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿವಿಧ ಫೈನಾನ್ಸ್‌ಗಳು ಅನ್ಯಾಯವೆಸಗುತ್ತಿವೆ. ಸರ್ಕಾರದ ಸುಗ್ರೀವಾಜ್ಞೆ ಆದೇಶದಂತೆ ಲೈಸೆನ್ಸ್ ಪಡೆಯದೇ ಸಾಲ ನೀಡಿರುವ ಅನಧಿಕೃತ ಫೈನಾನ್ಸ್‌ಗಳಿಂದ ಸಾಲ ಪಡೆದವರು ಅಸಲು ಸೇರಿದಂತೆ ಬಡ್ಡಿಯನ್ನ ಕಟ್ಟುವದನ್ನ ನಿಲ್ಲಿಸಬೇಕೆಂದು ಹೇಳಿದರು. ಪ್ರತಿನಿತ್ಯ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಸಾಲಗಾರರ ಮನೆಗೆ ಆಗಮಿಸಿ ಸಾಲ ಪಡೆದವರೊಂದಿಗೆ ಅನುಚಿತವಾಗಿ ವರ್ತಿಸುತ್ತಿವೆಯೆಂದು ಆರೋಪಿಸಿದರು.
ಪತ್ರಿಕಾಗೋಷ್ಠಿ ಮುಗಿಸಿ ಹೊರಗಡೆ ಬಂದ ಕೂಡಲೇ ಗಿರೀಶ ಮಟ್ಟಣ್ಣವರ, ಇತರರಿಗೆ ಧರ್ಮಸ್ಥಳ ಗ್ರಾಮಾಭೀವೃದ್ದಿ ಸಂಘದ ನೂರಾರು ಮಹಿಳಾ ಪ್ರತಿನಿಧಿಗಳು ಮುತ್ತಿಗೆ ಹಾಕಲು ಯತ್ನಿಸಿದರು. ಧರ್ಮಸ್ಥಳ ಸ್ವಸಹಾಯ ಸಂಘಗಳಿಂದ ನಾವೆಲ್ಲ ಬದುಕು ಕಟ್ಟಿಕೊಂಡಿದ್ದೇವೆ. ನಮಗೆಲ್ಲ ಒಳ್ಳೆಯದೇ ಆಗಿದೆ. ನಮ್ಮ ಸಂಘದ ವಿರುದ್ಧ ಮಾತನಾಡುವರು ನಮ್ಮ ಸಾಲವನ್ನೇನಾದ್ರೂ ಮನ್ನಾ ಮಾಡುತ್ತಾರಾ? ಇದು ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಅವರಿಗೆ ಹಾಗೂ ನಮ್ಮ ಸಂಘಕ್ಕೆ ಅಪಪ್ರಚಾರ ಮಾಡುವ ಉದ್ದೇಶದಿಂದಲೇ ಪತ್ರಿಕಾಗೋಷ್ಠಿ ನಡೆಸಿದ್ದೀರಿಯೆಂದು ರೊಚ್ಚಿಗೆದ್ದ ಮಹಿಳೆಯರು ಮೂರು ಗಂಟೆಗಳ ಕಾಲ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿದ ಶಹರ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಶಹರ ಠಾಣೆ ಸಿಪಿಐ ಡಿ.ಬಿ.ಪಾಟೀಲ,ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದು ಮಹಿಳೆಯರ ಮನವೊಲಿಸುವಲ್ಲಿ ಹರಸಾಹಸ ಪಡಬೇಕಾಯಿತು. ಕೊನೆಗೆ ಮಹಿಳೆಯರನ್ನ ಚದುರಿಸಿ ಪೊಲೀಸರ ರಕ್ಷಣೆಯಲ್ಲಿ ಗಿರೀಶ ಮಟ್ಟಣ್ಣವರ ಹಾಗೂ ಅವರ ಸಂಗಡಿಗರನ್ನು ಪತ್ರಿಕಾ ಭವನದಿಂದ ಹೊರಗೆ ಕಳುಹಿಸಿಕೊಡಲಾಯಿತು.