ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆಗೆ ಮನವಿ

ಚಿತ್ರದುರ್ಗ, ದಾವಣಗರೆ ಅಥವಾ ಹುಬ್ಬಳ್ಳಿಯಲ್ಲಿ ಸಮಾವೇಶ

ನವದೆಹಲಿ: ‘ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವದಾಗಿ ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ತುಮಕೂರು ಜಿಲ್ಲೆ ಹಾಗೂ ಪಕ್ಷ ಸಂಘಟನೆಗೆ ಗಮನ ನೀಡಬೇಕಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ನೀಡಿರುವೆ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಲಸ ಮಾಡಬೇಕಿದೆ. ನಾನು ಯಾವ ಜಿಲ್ಲೆಗೂ ಉಸ್ತುವಾರಿ ಕೊಡಿ ಎಂದು ಕೇಳುವುದಿಲ್ಲ ಎಂದರು.

ಪ್ರತ್ಯೇಕ ಸಮಾವೇಶ ಅಗತ್ಯ: ರಾಜ್ಯದಲ್ಲಿ ಶೋಷಿತರ ಸಮಾವೇಶ ನಡೆಸಲು ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸಮಾವೇಶದಲ್ಲಿ ಭಾಗವಹಿಸುವುದಾಗಿ ರಾಷ್ಟ್ರೀಯ ನಾಯಕರು ತಿಳಿಸಿದ್ದಾರೆ, ದಲಿತ ಸಚಿವರಿಂದ ಪ್ರತ್ಯೇಕ ಸಮಾವೇಶದ ಅಗತ್ಯವನ್ನು ನಾಯಕರ ಗಮನಕ್ಕೆ ತಂದಿದ್ದೇವೆ. ನಾನು ಎಸ್​ಟಿ ಸಮುದಾಯದ ಮತಗಳಿಂದ ಮಾತ್ರ ಗೆದ್ದಿಲ್ಲ. ಎಲ್ಲ ಸಮುದಾಯದ ಆಶೀರ್ವಾದ ಬೇಕು. ಕಾಂಗ್ರೆಸ್​ಗೆ ಯಾವ ಸಮಾವೇಶ ಮಾಡಿದರೆ ಒಳ್ಳೆಯದೋ, ಆ ಸಮಾವೇಶ ಮಾಡಬೇಕು. ಮತ್ತೆ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಜಾಗೃತಿ ಮೂಡಿಸಬೇಕಿದೆ, ಸಮಾವೇಶದ ಅಗತ್ಯವನ್ನು ಕೇಂದ್ರ ನಾಯಕರ ಗಮನಕ್ಕೆ ತಂದಿದ್ದೇವೆ. ಕೇಂದ್ರದ ನಾಯಕರನ್ನು ಸಮಾವೇಶಕ್ಕೆ ಕರೆಸುತ್ತೇವೆ. ಮುಂದಿನ ದಿನಗಳಲ್ಲಿ ಸಮಾವೇಶಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಪಕ್ಷದ ವೇದಿಕೆಯಲ್ಲಿಯೇ ಸಮಾವೇಶ ಮಾಡುತ್ತೇವೆ. ಚಿತ್ರದುರ್ಗ, ದಾವಣಗರೆ ಅಥವಾ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಯುತ್ತದೆ. ಪಕ್ಷ ಗಟ್ಟಿಯಾದರೆ ಸಿದ್ದರಾಮಯ್ಯನವರು ಇರುತ್ತಾರೆ ಎಂದರು.