ಕಾರ್ಖಾನೆ ವಿಸ್ತರಣೆ ಮಾಡದಿರಲು ಮನವಿ

ಕೊಪ್ಪಳ: ಬಲ್ಡೋಟ ಸಮೂಹದಿಂದ ಎಂ.ಎಸ್.ಪಿ.ಎಲ್. ಕಾರ್ಖಾನೆ ವಿಸ್ತರಣೆ ಮಾಡದಂತೆ ಒತ್ತಾಯಿಸಿ ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬಲ್ದೋಟ ಸಮೂಹ ಹಾಗೂ ರಾಜ್ಯ ಸರಕಾರ ಉಕ್ಕು ಘಟಕದ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡ ನಂತರ ಕೊಪ್ಪಳದಲ್ಲಿ ವ್ಯಕ್ತವಾದ ವಿರೋಧವನ್ನು ಗಮನದಲ್ಲಿಟ್ಟುಕೊಂಡು ಶುಕ್ರವಾರ ಬೆಳಿಗ್ಗೆ ಜೆ ಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಭೂಮರೆಡ್ಡಿ ಅವರು ಕೇಂದ್ರ ಸಚಿವರನ್ನು ಬೆಂಗಳೂರಿನ ಜೆ ಪಿ ನಗರದ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಘಟಕದ ಸ್ಥಾಪನೆಯಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಮಾಹಿತಿ ನೀಡಿ ಮಧ್ಯಪ್ರವೇಶಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು.

ಕೈಗಾರಿಕಾ ಘಟಕಗಳ ಮಾಲಿನ್ಯದಿಂದ ಈಗಾಗಲೇ ನಲುಗಿ ಹೋಗಿರುವ ಕೊಪ್ಪಳದ ಜನತೆಯನ್ನು ರಾಜ್ಯ ಸರಕಾರ ಬೆಂಕಿಯಿಂದ ಬಾಣಲೆಗೆ ನೂಕಿದೆ. ಸಮುದಾಯದ ಆರೋಗ್ಯ ಹಾಗೂ ಕೃಷಿ ಕ್ಷೇತ್ರಗಳ ಮೇಲೆ ಮಾರಕ ಪೆಟ್ಟು ನೀಡುವ ಈ ಯೋಜನೆ ಯಾವುದೇ ಕಾರಣಕ್ಕೂ ಅನುಷ್ಠಾನವಾಗಬಾರದು. ಕ್ರಿಯಾಶೀಲವಾಗಿರುವ ಕೈಗಾರಿಕಾ ಘಟಕಗಳು ನಿಯಮಗಳನ್ನು ಉಲ್ಲಂಘಿಸಿ, ಕೊಪ್ಪಳವನ್ನು ನರಕ ಸದೃಶವನ್ನಾಗಿಸಿವೆ. ಅವುಗಳ ವಿರುದ್ಧ ಕೇಂದ್ರ ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ತಮಗೆ ಕೊಪ್ಪಳದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ಇದೆ. ಅಭಿವೃದ್ಧಿಗೆ ಕೈಗಾರಿಕಾ ಘಟಕಗಳ ಸ್ಥಾಪನೆ ಅಗತ್ಯ. ಆದರೆ ಸಮುದಾಯದ ಆರೋಗ್ಯ, ಪರಿಸರ ಹಾಗೂ ಕೃಷಿ ಕ್ಷೇತ್ರಗಳಿಗೆ ಮಾರಕವಾಗುವ ಯಾವುದೇ ಯೋಜನೆಗಳನ್ನು ಒಪ್ಪಲಾಗದು. ಕೊಪ್ಪಳ ಜನತೆಯ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸಲಾಗುವುದು. ಬಲ್ಡೋಟ ಸಮೂಹದ ಉದ್ದೇಶಿತ 54,000 ಕೋಟಿ ರೂ‌‌. ವೆಚ್ಚದ ಉಕ್ಕು ಕೈಗಾರಿಕಾ ಘಟಕದ ಸ್ಥಾಪನೆಯ ವಿರುದ್ಧ ವ್ಯಕ್ತವಾಗುತ್ತಿರುವ ವಿರೋಧವನ್ನು ಗಮನದಲ್ಲಿಟ್ಟುಕೊಂಡು ಕೊಪ್ಪಳ ಜನತೆಯ ಬೇಡಿಕೆಗೆ ಸ್ಪಂದಿಸಲು ಸೂಕ್ತ ಕ್ರಮ‌ ಕೈಗೊಳ್ಳುಲಾವುದು ಎಂದು ಭರವಸೆ ನೀಡಿದರು.