ವಿಜಯಪುರ: ಭೀಮಾತೀರದ ಹಂತಕ ಭಾಗಪ್ಪ ಹರಿಜನ ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ಪೊಲೀಸ್ ತಂಡ ಚುರುಕುಗೊಳಿಸಿದ್ದು ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆದರೆ ಈ ಕ್ಷಣದವರೆಗೆ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸಲಾಗಿಲ್ಲ. ಬಹುಶಃ ನಾಳೆ ಮಧ್ಯಾಹ್ನದ ವೇಳೆಗೆ ಪ್ರಕರಣವನ್ನು ಬೇಧಿಸಲು ಸಾಧ್ಯವಾಗಲಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಸ್ವತಃ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಗಳಿವೆ ಎಂದು ಹಿರಿಯ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಹಲವು ಆಯಾಮಗಳಲ್ಲಿ ತನಿಖೆ
ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿನ ಮಾಹಿತಿ ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡಿಜಿಟಲ್ ಸಾಕ್ಷಿಗಳನ್ನು ಕಲೆ ಹಾಕಲಾಗುತ್ತಿದೆ. ಅಲ್ಲದೇ ಈ ಹಿಂದೆ ಭಾಗಪ್ಪ ಹರಿಜನ ಮೇಲಿದ್ದ ಪ್ರಕರಣಗಳನ್ನು ಜಾಲಾಡುತ್ತಿದ್ದು, ಕೊಲೆಗೆ ಲಿಂಕ್ ದೊರಕಬಹುದೇ ಎಂದು ವಿಚಾರಿಸಲಾಗುತ್ತಿದೆ.
ಈ ಹಿಂದೆ ಭಾಗಪ್ಪನ ಮೇಲೆ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳು, ಆತನ ವಿರುದ್ಧ ದ್ವೇಷ ಸಾಧಿಸುತ್ತಿದ್ದ ವ್ಯಕ್ತಿಗಳ ಪಟ್ಟಿ ಮಾಡಲಾಗಿದ್ದು ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.
ಪಿಂಟೂನ ಬಂಧನಕ್ಕೆ ಬಲೆ ಬೀಸಲಾಗಿದ್ದು ಯಾವುದೇ ಕ್ಷಣದಲ್ಲೂ ಆತನನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ತನ್ನ ಸಹೋದರನ ಕೊಲೆಯ ನಂತರ ಪಿಂಟೂ ಸರಿಯಾಗಿ ಊಟವನ್ನೇ ಮಾಡದೇ ದ್ವೇಷಾಗ್ನಿಯಲ್ಲಿ ಬೇಯುತ್ತಿದ್ದ ಎಂಬ ಮಾಹಿತಿ ಇದ್ದು ಆತನನ್ನು ಬಂಧಿಸಿದ ನಂತರವೇ ಆತನೊಂದಿಗೆ ಬೇರೆ ಯಾವ ಗ್ಯಾಂಗ್ ಕೈ ಜೋಡಿಸಿದೆ ಎಂಬ ಮಾಹಿತಿ ಬಯಲಾಗಲಿದೆ.
ಅದೇ ರೀತಿ ಮಂಗಳವಾರ ಭಾಗಪ್ಪನೊಂದಿಗೆ ವಾಕಿಂಗ್‌ನಲ್ಲಿ ಜೊತೆಯಿದ್ದ ಎನ್ನಲಾದ ವ್ಯಕ್ತಿ ಹಾಗೂ ಭಾಗಪ್ಪನ ಮನೆಯಲ್ಲಿ ಅಡುಗೆ ಮಾಡಿಕೊಂಡಿದ್ದ ಮಹಿಳೆ ಸೇರಿದಂತೆ ಹಲವರ ಹೇಳಿಕೆಗಳನ್ನು ಪಡೆಯಲಾಗುತ್ತಿದೆ. ವಿಜಯಪುರ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದು ಆರೋಪಿಗಳನ್ನು ಹೆಡೆಮುರಿ ಕಟ್ಟಲು ಶತಪ್ರಯತ್ನ ಮಾಡುತ್ತಿದ್ದಾರೆ.