ಶ್ರೀಮದಾಚಾರ್ಯರಿಗೆ ಅನಾದಿಕಾಲದಿಂದಲೂ ಪರಮಾತ್ಮನ ಹೊರತು ಇನ್ನೊಂದು ವಿಷಯದಲ್ಲಿ ಆಸಕ್ತಿಯೇ ಇಲ್ಲ. ಅಂತಹ ವಿರಕ್ತ ಶಿಖಾಮಣಿಗಳಾದ ಶ್ರೀಮದಾಚಾರ್ಯರಿಗೆ ಸಂನ್ಯಾಸಾಶ್ರಮ ತೆಗೆದುಕೊಂಡ ನಂತರ ವೈರಾಗ್ಯ ಬಂದದ್ದಲ್ಲ. ವೈರಾಗ್ಯ ಇದೀಗ ಬಂದಿದ್ದಕ್ಕೆ ಸಂನ್ಯಾಸವಲ್ಲ. ಅನಾದಿಕಾಲದಿಂದಲೂ ವೈರಾಗ್ಯ ಬಂದದ್ದಕ್ಕೆ ಅನಾದಿಕಾಲದಿಂದಲೂ ಅವರಿಗೆ ಸಂನ್ಯಾಸಾಶ್ರಮ ಇದ್ದಂತೆಯೇ. ಅಂತಹ ಮಹಾನುಭಾವರು ಶ್ರೀಮದಾಚಾರ್ಯರು.
ಅವರ ಅನುಸಂಧಾನ ಏನು? ಹಿರಣ್ಯಕಶಿಪು ಪ್ರಹ್ಲಾದರಾಜರಿಗೆ, ಎಲ್ಲಿದ್ದಾನೆ ನಿನ್ನ ಭಗವಂತ? ಎಲ್ಲ ಕಡೆ ಇದ್ದಾನೆ ಎಂದು ಹೇಳುವೆಯಲ್ಲ, ಎಲ್ಲಿದ್ದಾನೆ? ಕಂಬದಲ್ಲಿ ಇರುವನೇ? ನಿನ್ನ ಭಗವಂತನ ತೋರಿಸು' ಎಂದು ಕೇಳಿದ್ದಕ್ಕೆ ಪ್ರಹ್ಲಾದರಾಜರು,
ಕಂಬದಲ್ಲಿ ಇದ್ದಾನೆ’ ಎಂದು ಉತ್ತರಿಸಿದರು. ಆ ತರಹದ ವ್ಯಾಪ್ತ ಉಪಾಸನೆಯನ್ನು ಮಾಡಿರುವ ಪ್ರಹ್ಲಾದರಾಜರಿಗಿಂತ ಅತ್ಯುತ್ತಮವಾದ ವಾಯುದೇವರ ಉಪಾಸನೆಯನ್ನು ಮಾಡುವ ಶ್ರೀಮದಾಚಾರ್ಯರು ಎಲ್ಲ ಕಡೆಗೂ ನಮಸ್ಕಾರ ಮಾಡುತ್ತಾರೆ. ಶ್ರೀಮದಾಚಾರ್ಯರು ಎಲ್ಲ ಕಡೆಯ ದೇವರಿಗೆ, ಎಲ್ಲ ಮನೆಮನೆಯಲ್ಲಿರುವ ವಸ್ತುಗಳಿಗೆ, ಫಲಕ್ಕೆ, ಬೇಳೆಕಾಳುಗಳಿಗೆ, ದನಕರುಗಳಿಗೆ ನಮಸ್ಕಾರ ಮಾಡುತ್ತಾರೆ. ಗುರುಹಿರಿಯರಿಗೆ, ದೇವರಿಗೆ ನಮಸ್ಕಾರ ಮಾಡುವುದನ್ನು ನೋಡಿರುತ್ತೇವೆ. ಕಾಣುವ ಎಲ್ಲ ವಸ್ತು-ಜೀವಿಗಳಿಗೆ ನಮಸ್ಕಾರ ಮಾಡುವುದು ಏಕೆ?' ಎಂದು ಕೇಳಿದಾಗ ಶ್ರೀಮದಾಚಾರ್ಯರು,
ಯಾವುದು ಇಡೀ ಜಗತ್ತಿನಲ್ಲಿ ವಾಸ ಮಾಡುತ್ತದೆಯೋ ಅದೇ ವಸ್ತು ಅಲ್ಲಿದೆ. ವಸ್ತು ಅಂದರೆ ಏನು? ಇಡೀ ಜಗತ್ತಿನಲ್ಲಿ ವಾಸ ಮಾಡಿದಂತಹ ವ್ಯಕ್ತಿ. ಎಲ್ಲರಲ್ಲಿಯೂ ವಾಸ ಮಾಡುವ, ಯಾರಿಂದಲೂ ಸೋಲದಂತಹ ವಸ್ತು ಎಂದರೆ ಶ್ರೀಮನ್ನಾರಾಯಣನೊಬ್ಬನೇ’ ಎಂದು ಭಾಗವತ ತಾತ್ಪರ್ಯದಲ್ಲಿ ಉತ್ತರಿಸಿದ್ದಾರೆ.ಜಗತ್ತಿನ ವಾಸ್ತುವಿನ ತುಂಬೆಲ್ಲ ವಾಸ ಮಾಡುವಂತಹ ವಸ್ತು ಎಂದು ಅನಿಸಿಕೊಳ್ಳಬೇಕಾದ ವ್ಯಕ್ತಿ ಒಬ್ಬನೇ ಒಬ್ಬ. ಅವನು ನಾರಾಯಣ. ಅವನಿಗೆ ನಾನು ನಮಸ್ಕಾರ ಮಾಡಿದ್ದು. ಈ ಜಡ ಮಣ್ಣು-ಕಲ್ಲುಗಳಿಗಲ್ಲ' ಎಂದು ವ್ಯಾಪ್ತೋಪಾಸನೆಯನ್ನು ತಿಳಿಸುತ್ತಾರೆ.
ಉಪಾಸನೆಯನ್ನು ಮಾಡುವ ಅಧಿಕಾರ ಎಲ್ಲರಿಗೂ ಇಲ್ಲದಿದ್ದರೂ, ದೇವರು ಎಲ್ಲ ಕಡೆ ಇದ್ದಾನೆ ಎಂದು ತಿಳಿಯಿರಿ’ ಎನ್ನುವ ಸಂದೇಶವನ್ನು ಇಲ್ಲಿ ಕೊಟ್ಟಿದ್ದಾರೆ.
ಸ್ವಯಂ ಸರ್ವಜ್ಞರಾದರೂ ಗುರುಗಳ ಹತ್ತಿರ ಹೋಗಿ ಗುರುಗಳಿಂದ ಉಪದೇಶವನ್ನು ಪಡೆದು ಆಶ್ರಮವನ್ನು ಪಡೆದುಕೊಂಡರು. ಸಾಕ್ಷಾತ್ ವೇದವ್ಯಾಸದೇವರು ಶ್ರೀಮದಾಚಾರ್ಯರಿಗೆ ಉಪದೇಶ ಮಾಡಿದ್ದಾರೆ. ಅಂತಹ ವೇದವ್ಯಾಸರ ಶಿಷ್ಯರಾದ ಶ್ರೀಮದಾಚಾರ್ಯರು ಅಚ್ಯುತಪ್ರೇಕ್ಷರನ್ನು ಗುರುಗಳನ್ನಾಗಿ ಪಡೆಯುವ ಆವಶ್ಯಕತೆ ಇರಲಿಲ್ಲ. ಆದರೂ ಭಗವಂತನ ನಿಯಮವನ್ನು ಜಗತ್ತಿಗೆ ತಿಳಿಸುವುದಕ್ಕಾಗಿ, ಲೋಕಶಿಕ್ಷಣ ಮಾಡುವುದಕ್ಕೋಸ್ಕರ ಗುರುಗಳಾದ ಅಚ್ಯುತಪ್ರೇಕ್ಷರಿಂದ ಗುರೂಪದೇಶ, ದೀಕ್ಷೆ ಪಡೆದು ಯತ್ಯಾಶ್ರಮವನ್ನು ಸ್ವೀಕಾರ ಮಾಡಿದ್ದಾರೆ. ವಾಯು-ಗುರುಗಳು ನಮಗೆ ಅದೇ ತರಹದ ಯೋಗವನ್ನು ಕರುಣಿಸಿಕೊಡಬೇಕು ಎಂದು ನಾವು ಸಂಕಲ್ಪಿಸಬೇಕು ಎಂದು ಗುರುಗಳು ಭಕ್ತವೃಂದಕ್ಕೆ ಉಪದೇಶಿಸಿದ್ದಾರೆ.