ಹೊಸಪೇಟೆ: ಹಣ ಡಬ್ಲಿಂಗ್ ಹೆಸರಲ್ಲಿ ನೂರಾರು ಜನರಿಗೆ ಕೋಟ್ಯಂತರ ರೂ. ಮೋಸ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮೋಸ ಹೋದವರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹೊಸಪೇಟೆಯ ಅರವಿಂದ ನಗರ ನಿವಾಸಿ ಮುಮ್ತಾಜ್ ಬೇಗಂ ಅವರು ತಮ್ಮ ಅಳಿಯ ಸೈಯದ್ ಜುಬೇರ್ ಕೇರಳದಲ್ಲಿದ್ದು, ಶೇರು ಮಾರ್ಕೆಟ್, ಟೂರ್‌ನ್ ಅಂಡ್ ಟ್ರಾವೆಲ್ಸ್, ಪೆಟ್ರೋಲ್ ಬಂಕ್, ಮಲಬಾರ್ ಗೋಲ್ಡ್ನಲ್ಲಿ ಇನ್ವೆಸ್ಟ್ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಮತ್ತು ಬೆಂಗಳೂರಿನಲ್ಲಿ ಪೈಪ್ ಫ್ಯಾಕ್ಟರಿ ನಡೆಸುತ್ತಿದ್ದು, ಅದಕ್ಕೆ ಹೂಡಿಕೆ ಮಾಡಿದ್ದರಿಂದ ಶೇ.೫೦ ರಷ್ಟು ರಿಟರ್ನ್ಸ್ ತೆಗೆದುಕೊಳ್ಳುತ್ತಿದ್ದೇವೆ. ಇತರರಿಗೆ ಶೇ.೧೬ ರಷ್ಟು ಲಾಭ ಕೊಡಿಸುತ್ತೇವೆ ಎಂದು ನಂಬಿಸಿದ್ದರು.
ಅವರ ಮಾತಿಗೆ ಮರುಳಾಗಿದ್ದ ಹೊಸಪೇಟೆ ೧೯ನೇ ವಾರ್ಡ್ನ ಕುರುಬರ ಬೀದಿ ನಿವಾಸಿ ಎಂ.ಅನಿಷಾ ಎಂಬುವವರು ತಾವು, ತಮ್ಮ ಸ್ನೇಹಿತರು, ಸಂಬಂಧಿಕರಿಂದಲೂ ಹಣ ಸಂಗ್ರಹಿಸಿ ಸುಮಾರು ೧.೨೦ ಕೋಟಿ ರೂ. ಹಾಗೂ ಸ್ನೇಹಿತ ರಾಘವೇಂದ್ರ ಎಂಬುವವರಿಂದ ೩೯ ಲಕ್ಷ ರೂ. ಸಂಗ್ರಹಿಸಿಕೊಟ್ಟಿದ್ದರು. ಆದರೆ, ಮುಮ್ತಾಜ್ ಬೇಗಂ ಹಣ ನೀಡದೇ, ತಲೆ ಮರೆಸಿಕೊಂಡಿದ್ದಾರೆ.
ಅಲ್ಲದೇ, ತಮ್ಮಂತೆಯೇ ನೂರಾರು ಜನರಿಗೆ ಕನಿಷ್ಠ ೨ ಲಕ್ಷ ರೂ. ಗಳಿಂದ ೩೦ ಲಕ್ಷ ರೂ. ವರೆಗೆ ವಂಚಿಸಿದ್ದಾರೆ ಎಂದು ದೂರು ನೀಡಲಾಗಿದೆ.
ಈ ಕುರಿತು ಪ್ರಕರಣದ ಆರೋಪಿಗಳಾಗಿರುವ ಮುಮ್ತಾಜ್ ಬೇಗಂ(೫೧), ಮಕ್ಕಳಾದ ನಸ್ರೀನ್, ತಸ್ಲಿಮಾ ಬಾನು, ಆರೀಫಾ ಬೇಗಂ, ಅಳಿಯಂದಿರಾದ ಜಬೀರ್, ಸೈಯದ್ ಜುಬೇರಾ, ಆರ್ಷಿಯಾ, ಆಫೀಸ್ ಬಾಯ್ ನಬಿ ರಸೂಲ್ ವಿರುದ್ಧ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ, ಇನ್ನುಳಿದವರಿಗಾಗಿ ಶೋಧ ನಡೆಯುತ್ತಿದೆ ಎಂದು ಎಸ್ಪಿ ಶ್ರೀ ಹರಿಬಾಬು ಮಾಹಿತಿ ನೀಡಿದ್ದಾರೆ.