ಕೋಲಾರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಯಿಸುವಂತ ನಾನು ಒತ್ತಾಯ ಮಾಡಲ್ಲ. ಒಂದು ವೇಳೆ ನನಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವಕಾಶ ಕೊಟ್ಟರೆ ನಿಭಾಯಿಸುವೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಇದ್ದಾರೆ. ಆಕಸ್ಮಿಕವಾಗಿ ಬದಲಾವಣೆಯಾದರೆ ನಾನು ರಾಜ್ಯಾಧ್ಯಕ್ಷರಾಗಲು ಸಿದ್ಧ ಎಂದರು.
ಬಸವನಗೌಡ ಯತ್ನಾಳ್ ನಮ್ಮ ಹೆಸರು ಪ್ರಸ್ತಾವನೆ ಮಾಡಿದ್ದಾರೆ. ದೊಡ್ಡ ಮನಸ್ಸಿನಿಂದ ಅವರು ನಮ್ಮ ಹೆಸರು ಪ್ರಸ್ತಾಪ ಮಾಡಿರುವುದು ಸಂತೋಷ. ಯಡಿಯೂರಪ್ಪ ಅವರಿಂದ ಬೆಳೆದಿದ್ದೇವೆ, ಅವರು ಮನಸ್ಸು ಮಾಡಿ ನನಗೆ ಅವಕಾಶ ಕೊಟ್ಟರೆ. ರಾಜ್ಯದ 224 ಕ್ಷೇತ್ರದಲ್ಲಿ ಸಂಘಟನೆ ಮಾಡಿ ಭಿನ್ನಾಭಿಪ್ರಾಯ ಶಮನ ಮಾಡುವೆ. ಮುಂಬರುವ 2028ರಲ್ಲಿ ಬಿಜೆಪಿ 150 ಸ್ಥಾನ ಗೆಲ್ಲುವಂತೆ ಕೆಲಸ ಮಾಡುತ್ತೇನೆ ಎಂದರು.
ಯಡಿಯೂರಪ್ಪ ಅವರ ಆಶೀರ್ವಾದ ಬೇಕಾಗಿದೆ. ಒಂದು ವೇಳೆ ಹೈಕಮಾಂಡ್ ಬದಲಾವಣೆ ಮಾಡಿದರೆ ನಾನು ಸಿದ್ಧ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು, ಇರುವ ಗೊಂದಲ ನಿವಾರಣೆಯಾಗಬೇಕು. ದೆಹಲಿಗೆ ಹೋಗಿರುವರನ್ನು ಸಮಾಧಾನ ಮಾಡಬೇಕಾಗಿದೆ. ದಕ್ಷಿಣ ಭಾರತದ ಭೀಷ್ಮರಾಗಿರುವ ಯಡಿಯೂರಪ್ಪ ಮುಂದಾಳತ್ವ ತೆಗೆದುಕೊಳ್ಳಬೇಕಾಗಿದೆ. ವಿಜಯೇಂದ್ರ ಅವರು ಹೊಸದಾಗಿ ಅಧ್ಯಕ್ಷರಾಗಿದ್ದು ಅನುಭವದ ಕೊರತೆಯಾಗಿದೆ. ಈ ಹಿನ್ನಲೆ ಯಡಿಯೂರಪ್ಪ ಮುಂದೆ ಬರಬೇಕು ಎಂದರು.
ಜನಾರ್ಧನ ರೆಡ್ದಿ ಬಂದ ಮೇಲೆ ಒಬ್ಬಂಟಿಯಾಗಿರುವ ಕುರಿತು ಮಾತನಾಡಿ, ರಾಜಕೀಯ ಬೇರೆ, ವೈಯಕ್ತಿಕ ಜೀವನವೇ ಬೇರೆ, ಈಗಾಗಲೇ ಇದರ ಬಗ್ಗೆ ಮಾತನಾಡಿರುವೆ ಪದೇ ಪದೇ ಮಾತನಾಡುವುದು ಬೇಡ. ಕಾಂಗ್ರೆಸ್‌ನವರು ಅಭಿಮಾನದಿಂದ ಮತ್ತು ನಮ್ಮ ಸಂಘಟನೆ ನೋಡಿ ಕರೆದಿದ್ದಾರೆ ಎಂದರು.