ದಾವಣಗೆರೆ: ಬಾಯ್ಲರ್ ಡ್ರಂ ಮುರಿದು ಬಿದ್ದ ಪರಿಣಾಮ ೪ನೇ ತರಗತಿ ಓದುತ್ತಿದ್ದ ಬಾಲಕ ಸಾವಿಗೀಡಾದ ಘಟನೆ ನಗರದ ಶಿವಕುಮಾರಸ್ವಾಮಿ ಬಡಾವಣೆಯ ಮಂಜುನಾಥ ವಸತಿಯುತ ಶಾಲೆಯಲ್ಲಿ ಸಂಭವಿಸಿದೆ.
ಹರಿಹರ ತಾಲ್ಲೂಕು ಜಿಗಳಿ ಗ್ರಾಮದ 9 ವರ್ಷದ ಬಾಲಕ ರಂಗನಾಥ ಘಟನೆಯಲ್ಲಿ ಸಾವಿಗೀಡಾದ ದುರ್ದೈವಿ. ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ನಿನ್ನೆ ಹಾಸ್ಟೆಲ್‌ನ ಮಾಳಿಗೆ ಮೇಲೆ ಆಟ ಆಡುತ್ತಿದ್ದ. ಈ ವೇಳೆ ಬಾಯ್ಲರ್‌ನ ಡ್ರಂ ಮುರಿದು ಮೈ ಮೇಲೆ ಬಿದ್ದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗೆಂದು ಚಿಗಟೇರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದ ಆತ ಮಂಗಳವಾರ ಅಸುನೀಗಿದ್ದಾನೆ. ಬಾಲಕನ ಸಾವಿನಿಂದ ಆಕ್ರೋಶಗೊಂಡ ಆತನ ಪೋಷಕರು ಮತ್ತು ಸಂಬಂಧಿಕರು ವಾರ್ಡನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.