ಮೂಡಿಗೆರೆ: ಸರಳ ಮತ್ತು ಅರ್ಥಪೂರ್ಣವಾದ ಮಂತ್ರ ಮಾಂಗಲ್ಯ ವಿವಾಹವನ್ನು ಪ್ರೋತ್ಸಾಹಿಸಬೇಕಿದೆ ಎಂದು ಖ್ಯಾತ ನಟಿ ಪೂಜಾ ಗಾಂಧಿ ಹೇಳಿದರು.
ತಾಲೂಕಿನ ಹಿರೇಬೈಲ್‌ನಲ್ಲಿ ನಡೆದ ನಂದೀಶ್ ಬಂಕೇನಹಳ್ಳಿ ಮತ್ತು ದೀಕ್ಷಾ ಅವರ ಮಂತ್ರ ಮಾಂಗಲ್ಯ ವಿವಾಹದಲ್ಲಿ ವಿವಾಹ ಸಂಹಿತೆ ಭೋದನೆ ಮಾಡಿ ಅವರು ಮಾತನಾಡಿದರು.
ಮಂತ್ರ ಮಾಂಗಲ್ಯವೂ ಕುವೆಂಪು ಅವರ ಪರಿಕಲ್ಪನೆಯ ಒಂದು ಸರಳ ವಿವಾಹ ಪದ್ದತಿಯಾಗಿದೆ. ದುಂದುವೆಚ್ಚ ಮಾಡದೇ ವರದಕ್ಷಿಣೆ ತೆಗೆದುಕೊಳ್ಳದೇ ವಿವಾಹವಾಗಲು ಮಂತ್ರ ಮಾಂಗಲ್ಯ ಸೂಕ್ತ ವಿವಾಹ ಪದ್ಧತಿಯಾಗಿದೆ ಎಂದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರು ಮತ್ತು ಲೇಖಕರಾದ ಪ್ರದೀಪ್ ಕೆಂಜಿಗೆ ಮಾತನಾಡಿ, ಮಂತ್ರ ಮಾಂಗಲ್ಯ ವಿವಾಹವನ್ನು ಮಾಡಿಕೊಳ್ಳುವವರು ಕುಟುಂಬಸ್ಥರೊಂದಿಗೆ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ವಧು ವರರು ಮನೆ ಮಂದಿಯನ್ನು ಒಪ್ಪಿಸಿ ಮಂತ್ರ ಮಾಂಗಲ್ಯ ಪದ್ದತಿಯಲ್ಲಿ ವಿವಾಹವಾಗುವುದಕ್ಕೆ ಹೆತ್ತವರ ಸಹಕಾರವೂ ಮುಖ್ಯವಾಗುತ್ತದೆ ಎಂದರು.
ಉದ್ಯಮಿ ವಿಜಯ್ ಘೋರ್ಪಡೆ ಮಾತನಾಡಿ ವಿವಾಹ ಸಂಹಿತೆಯನ್ನು ಓದುವ ಮೂಲಕ ವಧು ವರರಿಬ್ಬರು ಜೀವನ ಮೌಲ್ಯಗಳ ಮಹತ್ವವನ್ನು ಅರಿತು ಮಾಂಗಲ್ಯ ಧಾರಣೆ ಮಾಡುವುದು ಅರ್ಥಪೂರ್ಣವಾದದ್ದು ಎಂದರು.
ಈ ಸಂದರ್ಭದಲ್ಲಿ ವಧು-ವರರ ಸಂಬಂಧಿಕರಾದ ಪಾರ್ವತಿ, ವೇಲಾಯುಧನ್, ಸುಮಿತ್ರ, ಅನ್ನಪೂರ್ಣ, ಕೃಷ್ಣ, ದೀಕ್ಷಿತ್, ನಂದೀನಿ, ಅಶ್ವಿನಿ, ಕೀಟ ತಜ್ಞ ಅವಿನಾಶ್, ಶಿಕ್ಷಕ ಪೂರ್ಣೇಶ್ ಮತ್ತಾವರ ಮುಂತಾದವರು ಇದ್ದರು.