ಕಲಬುರಗಿ: ನಗರದ ಕರುಣೇಶ್ವರ ನಗರದಲ್ಲಿರುವ ಚಂದ್ರಕಾಂತ್ ಪಾಟೀಲ್ ಶಾಲೆಗೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆ ಇರುವ ಈ ಮೇಲ್ ಬಂದಿದ್ದು ಇದರಿಂದ ಕೆಲ ಕಾಲ ಶಾಲೆಯಲ್ಲಿ ಆತಂಕ ಸೃಷ್ಟಿಯಾದ ಘಟನೆ ಮಂಗಳವಾರ ನಡೆದಿದೆ.
ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆಯ ಈ ಮೇಲ್ ಆಗಿದ್ದು, ಯಾರಿಗೋ ಕಳುಹಿಸಿ ಬೆದರಿಕೆ ಹುಟ್ಟಿಸುವ ಪ್ರಯತ್ನದಲ್ಲಿ ತಪ್ಪಾಗಿ ಚಂದ್ರಕಾಂತ್ ಪಾಟೀಲ ಶಾಲೆಯ ಮೇಲ್ ಬಾಕ್ಸ್‌ಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇ -ಮೇಲ್ ಸತ್ಯಾಸತ್ಯತೆಯನ್ನು ಪೊಲೀಸರು ತಪಾಸಣೆ ಮಾಡಿದ ಬಳಿಕ, ಅದೊಂದು ಹುಸಿ ಬಾಂಬ್ ಈ ಮೇಲ್ ಬೆದರಿಕೆಯಾಗಿದ್ದು, ತಪ್ಪಾಗಿ ಪೋಸ್ಟ್ ಮಾಡಲ್ಪಟ್ಟಿದ್ದು, ಬಾಂಬ್ ಇಟ್ಟು ಶಾಲೆಯನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಆದರೆ, ಇದು ತಪ್ಪಾಗಿ ಶಾಲೆಗೆ ಬಂದಿದೆ. ಈ ನಿಟ್ಟಿನಲ್ಲಿ ತನಿಖೆ ಮಾಡಲಾಗುತ್ತಿದೆ. ಈ ಹುಸಿ ಮೇಲ್ ನಿಂದ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಸ್ಪಷ್ಟಪಡಿಸಿದ್ದಾರೆ.
ಆದರೆ, ಇ- ಮೇಲ್ ಬೆದರಿಕೆ ಶಾಲೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕೆಲ ಕಾಲ ಆತಂಕ ಉಂಟು ಮಾಡಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಪಾಲಕರು ಶಾಲೆಯ ಬಳಿ ಓಡಿ ಬಂದಿದ್ದರು. ಈ ವೇಳೆ ಘಟನೆಯಿಂದ ಕೆಲ ಮಕ್ಕಳು ಹಾಗೂ ಪಾಲಕರು ಆತಂಕಗೊಂಡಿದ್ದರು, ಅಲ್ಲದೆ ತಪಾಸಣೆ ಮಾಡಬೇಕಾಗಿದ್ದರಿಂದ ಶ್ವಾನದಳ ತಂಡ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸದಸ್ಯರು ಕೂಡ ಶಾಲೆಯಲ್ಲಿ ತಪಾಸಣೆ ಮಾಡಿದರು. ಇದರಿಂದ ಎಲ್ಲ ಮಕ್ಕಳನ್ನು ಮನೆಗೆ ಕಳುಹಿಸಲಾಗಿತ್ತು.