ಕಾರವಾರ: ಹಾಲು ಕೊಡುವ ಗೋಹತ್ಯೆ ಸಹಿಸಲು ಸಾಧ್ಯವಿಲ್ಲ. ಮುಂದೆ ಇಂತಹ ಘಟನೆಗಳು ಮುಂದುವರಿದಲ್ಲಿ ಅಂತಹ ಆರೋಪಿಗಳನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕಾಗುತ್ತದೆ ಎಂದು ಮೀನುಗಾರಿಕೆ, ಬಂದರು ಸಚಿವ ಮಂಕಾಳ್ ವೈದ್ಯ ಗುಡುಗಿದ್ದಾರೆ.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆಯಲ್ಲಿ ಆಕಳ ಕಳ್ಳತನ ಹಲವು ವರ್ಷಗಳಿಂದ ನಡೆದುಬಂದಿದೆ. ಇಂತಹ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಈಗಾಗಲೇ ಹಲವು ಪ್ರಕರಣದಲ್ಲಿ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ. ಇನ್ನೂ ಮೇಲೆಯೂ ಇಂತಹ ಘಟನೆಗಳು ಮರುಕಳಿಸಿದರೇ ನಾವು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಶಾಸಕರ ವಿರುದ್ಧ ಆಕ್ರೋಶ
ಇನ್ನು ಶಾಸಕ ದಿನಕರ್ ಶೆಟ್ಟಿ ವಿರುದ್ಧ ಅಸಮಾಧಾನ ಹೊರಹಾಕಿದ ಸಚಿವರು ಕುಮಟಾದಲ್ಲೂ ಗೋಹತ್ಯೆ ನಡೆದಿವೆ, ಹಾಗಂತಾ ದಿನಕರ ಶೆಟ್ಟಿ ಅವರು ದಿನಕರ ಖಾನ್ ಆಗಿಬಿಡ್ತಾರಾ? ಮಾತನಾಡುವಾಗ ನೋಡಿಕೊಂಡು ಮಾತನಾಡಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಗೋಹತ್ಯೆಗಳು ನಡೆದಿವೆ. ಬಿಜೆಪಿ ಕೆಟ್ಟ ರಾಜಕಾರಣ ಮಾಡುವುದನ್ನು ಬಿಡಬೇಕು. ನಮ್ಮ ಸರ್ಕಾರದಲ್ಲಿ ಗೋಹತ್ಯೆ ಮಾಡಿದ ಆರೋಪಿಗಳ ಬಂಧನವಾಗಿದೆ. ನಾವು ಸುಮ್ಮನೆ ಕುಳಿತಿಲ್ಲ, ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ, ಗೃಹಮಂತ್ರಿ ಸಪೋರ್ಟ್ ಮಾಡಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಅದರಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.